Tuesday, June 30, 2009

ಯಾರು ಹೊಣೆ?

ಮೌನದನುವರಣ -
ಪ್ರಪಾತಕಿಳಿದಂತೆ, ಜಗ್ಗನೆ ಮೇಲೆದ್ದ
ಅಣುಸ್ಥಾವರದ ಶಕ್ತಿ ಮೂಲ
ಮೇಳವನ್ನಲ್ಲಲ್ಲೆ ಹುಸಿಯಾಡಿಸುತಿದೆ,
ಸಾಕಿಲ್ಲಿ! - ಎಂಬುವರಾರೂ ಇಲ್ಲದೆ
ಮಾನವರ ಜನನ ಸ್ವರೂಪದ ಶಕ್ತಿ
ಎಲ್ಲೆಯ ಮೀರಿ, ಸೊಲ್ಲವ ಸಾರಿ
ಭಗವಂತನ ದಿಕ್ಕನ್ನೇ ಬದಲಿಸಿರುವಾಗ
ಪ್ರಾಕೃತಿಕ ಎಂಬುದಕ್ಕೆ - ಯಾವ ಅಂಕೆ?

ಶೂನ್ಯದಲಿ ಬೆರೆತ -
ಬೆವೆತ ದಾರುಣದ ರೂಪಗಳು
ಮೇಘನಿಲ್ಲದೆ ವರ್ಷವ ಹರ್ಷಿಸುತ್ತ,
ಬೆವೆರ ಇಂಗಿಸುತ್ತ; ಕೆಳಗೆ -
ಮಲ್ಲಿಗೆಗಳ ಅರಳಿಸಿ, ಹಸಿರ ಸಿಂಪಡಿಸಿ
ಮೂಲದಲಿ ಕಮರಿಹೋದ ಪ್ರಾಣವ
ಗುಡುಗಿನ ಪ್ರಣವದಲಿ ಮರುಭವಿಸಿ
ಹೊಸ ಬುನಾದಿಯ ನಿರ್ಮಿಸೆ
ಹಳೆಯದನ್ನ ಹೊಸಕಿದೆ!

ಕವಿಯೆಂಬ -
ದಿಕಿಲ್ಲದ ಜೀವಿಯೊಂದು ಉನ್ಮಾದದಲಿ
ಕತ್ತಲೆಯೊಳಗೆ ಕಣ್ಣ ತೂರಿಸಿ
ಬೆಳಕ ಆಶಿಸುತ್ತಾ ಸಾಗಿರಲು,
ಭಾವನ ಹರಿಗೋಲು ಬೆನ್ನಟ್ಟಿ
ದಿಕ್ಸೂಚಿಯಾಗಿ ಬಂದಿರೆ
ಎಲ್ಲೆಯಲ್ಲೆಲ್ಲ ಕವನಗಳ ಸೋರ್ಬಣ್ಣ
ಮೂಡಲದ ಕೆಂಪಾಗಿ, ಕಾಮನ ಬಿಲ್ಲಾಗಿ
ಹುಟ್ಟಿ ಬಂದುದಕ್ಕೆ - ಯಾರು ಹೊಣೆ?

Monday, June 29, 2009

ಹಗಲು - ಇರುಳು

ನನಗೂ ಗೊತ್ತಿದೆ
ಎಲ್ಲರಿಗೂ ಪ್ರಾಪ್ತವೆಂದು - ಆ ಇರುಳು
ದುಃಖಗಳ ಮಲಗಿಸಲೆಂದು
ಆ ಅಶ್ರುವನ್ನ ಅಡಗಿಸಲೆಂದು;
ನನಗೆ ಗೊತ್ತಿದೆ ಸಹ
ಇರುವುದೆಲ್ಲರಿಗೆ - ಆ ಹಗಲು
ನೈಜತೆಯ ಬೆಳಗಲೆಂದು
ತೋಯ್ದ ಎದೆಯ ಒಣಗಿಸಲೆಂದು!

Sunday, June 28, 2009

ಭಯ

ಉಸಿರಾಡುವುದೇ ಶಿಕ್ಷೆಯಾಗುತ್ತಿದೆ ಈಗ
ಸಾವಿನ ಸನಿಹ ದೂರವಾಗಹತ್ತಿದೆ
ನೋಡಿದರಲ್ಲಲ್ಲೆ ವಿಕಸಿತಗೊಳ್ಳುತ್ತಿದೆ ಮರಣ
ಜೀವ ಹಿಂಡುವಂತಾಗಿದೆ ಹರಣ.

ಏಳುತ್ತಿರುವರಲ್ಲಲ್ಲೆ ನೋವಿನಧಿಪತಿಗಳು
ಹಿಂಜರಿಯುತ್ತಿದೆ ಧೈರ್ಯ ಶಂಕೆಯಲ್ಲಿ
ಆಡಾಡಿ ಬಂದಂತಿದೆ ಗೋರಿಗಳ ಸಾಲು
ಅಳತೆ ಹುಡುಕಹತ್ತಿದೆ ಮನಸ್ಸು.

ಬೆಳಕು ಮರಣಹೊಂದಿ ಕತ್ತಲಾಕ್ರಮಿಸುತ್ತಿದೆ
ಮನಸ ಒಳಕೂಗು ಗೂಬೆಯಾಗಿದೆ
ದೇಹವಿಲ್ಲದೇ ಹಣಕುತ್ತಿರುವ ಕಣ್ಣೋಟಗಳು
ಪಿಸುದನಿಗಳಲ್ಲಿ ಕಿರುಚಹತ್ತಿವೆ.

ನೋಡಿದವರಿಲ್ಲ ದಾರಿ ಬಂಜರಿನ ನಡುವೆ
ಬಳ್ಳಿಗಳಲ್ಲೆಲ್ಲ ಹೆಣಗಳ ಮಾಲೆ
ತಿರುಗಿದರೆ ಜೀವನದ ಋಣದಾರ್ಜನ
ಬೆಳ್ಳಿ ಪರದೆಯ ಮೇಲೆ ಪುನರಾವರ್ತನ.

ಮಾಡಿದ್ದಕ್ಕೆಲ್ಲ ಕಾರಣವ ಹುಡುಕಿದೆ ಮನ
ಒಪ್ಪಲೊಲ್ಲದು ಸತ್ಯ - ಭಯದಲ್ಲಿ,
ನಿಜ ಹೇಳಲೂ ಭಯ, ಸುಳ್ಳಿನಲಿ ಶಂಕೆ
ಈ ಭಯಸಾಗರದಿಂದೆಂದೂ ಬರಲಾರದು ಹೊರಗೆ.

Friday, June 26, 2009

ಓ ಆತ್ಮೀಯ!

ಓ ಆತ್ಮೀಯ! ಭೂತವಾಗುತಿದೆ ಬಾಳು!
ಪವಮಾನವೆದ್ದು - ಪವಡಿಕೆಯ ಹೋಳಿನಲಿ
ಕನಸಿಗೊಂದಾದಂತೆ ನನಸಿನಾ ಸೀಳಿನಲಿ
ಅನಿರ್ಭರದಿ ಪ್ರಸವಿಸಿದಳು ಪಯಸ್ವಿನಿ.

ವಿಧಾಯಕನಿಗಿಂದು ವಿಧಿ ಬದಲಿಸಿದೆ
ತಲ್ಲಣದ ತೃಷೆಯೆದ್ದು ಉಸಿರು ಬಿಸಿಯಾಗಿದೆ
ಹಿಂದಿನಾ ಅರೆಬತ್ತಲೆ ನೆನಪ ಸುಳಿಯೊಡೆದು
ದಾಹಕ್ಕೆ ಲವಣದಾ ಜಲವ ಸುರಿಸುತಲಿದೆ.

ಎಲ್ಲಿ ಉದ್ಭವಿಸಲಿ ಹೇಳು ನಾನೀಗ
ಭೂಮಿಯೆಲ್ಲವು ಮುಚ್ಚಿದೆ ಜಲರಾಶಿಯಲಿ
ನೀಲಿಯಾಕಾಶದ ನಡುವೆ, ಎದೆ ಬಿಚ್ಚಿ ಕುಳಿತು
ಎಲ್ಲ ಕೇಳಿರೆಂದು ಕಿರುಚಿ ಬಿಡಲೆ - ಹೇಳು?

ನನ್ನದೇ ಆಸ್ತಿಯೆಂದು ಕಾಪಾಡಿ ಸಲಹಿದಾ
ಎದೆ ಸಂಚುಗಳಾ ಹೆಂಚು ಹಾರಿ ಹೋಗಿರುವಾಗ
ನಿಜ ತೋರುವಂತದಲ್ಲ, ಇದು ನಿಜವಲ್ಲವೆಂಬ
ಬಾಲ ವಿನೋದದ ಮಾತಿನ ಮಳೆಗರೆಯಲೆ?

ನಿನ್ನ ಸಖ ನಾನೆಂದ ನೀ ಎಲ್ಲಿ ಬಚ್ಚಿರುವೆ ಹೇಳು
ನಿನ್ನ ಬಗ್ಗೆ ಯಾರಿಗೂ ಹೇಳಿಲ್ಲ ಇದುವರೆಗೆ
ಇವನದೆಲ್ಲವು ಭಾವನೆಯೆಂದು ಅಳಿದು ನಕ್ಕಾರು ಜನರು
ದಕ್ಕುವಂತವನಾಗು ನೀನು, ಭಗವಂತನಂತಲ್ಲದೆ!

Wednesday, June 24, 2009

ನಿನ್ನ ಮರೆಯಲಾರೆ

ನೋವಿನಾಳಗಳಲ್ಲೂ ನಲಿವಾಗಿ ಮೂಡುವ
ನಿನ್ನ ನೆನಪಿನ ಸಂತಸವನ್ನ ಹೇಗೆ ಮರೆಯಲಿ ಹೇಳು,
ಮನಸ ಮೂಲೆಗಳಲ್ಲಿ ಮಧುರ ಸ್ಪರ್ಶವಾಗಿಹ
ನಿನ್ನೊಡನಾಟದ ಸಂಗವನ್ನ ಕಳಚುವುದಾದರೂ ಹೇಗೆ?

ಇಲ್ಲವೆಂದಲ್ಲ - ಇದ್ದಂತೆಯೂ ಇಲ್ಲ ನಿನ್ನ ಸನಿಹ
ಸವಿಯಬಲ್ಲ, ಅಪ್ಪದಾಗದ ನೆನಪ ನಭವಾಗಿರುವೆ ನೀನು
ನಿನ್ನಲ್ಲೆ ಕುಳಿತು ತಂಗುವ ಬಯಕೆಗಳಿವೆ ಇಹೆಗೆ
ಅಲ್ಲಲ್ಲೆ ತಪ್ಪಿಹೋಗುತಿವೆ, ಮಧುರದಲ್ಲೆ ದೂರವಾಗಹತ್ತಿದೆ.

ಊಹೆಯಾಗಿ ಬಿಟ್ಟೆಯಾ, ಸ್ಪರ್ಶವಾಗದೆ ನೀನು
ಒಲವಿತ್ತು, ಅದರ ಬಲವಿತ್ತು ನಮ್ಮಲ್ಲಿ ಎಂದರೆ ನಂಬುವರಾರು?
ನಂಬದಿದ್ದರೇನಂತೆ ಬಿಡು, ಈ ಜನರಿಗೆ ಸದಾ ಶಂಕೆ
ನಮಗೆ ಗೊತ್ತು ನಮ್ಮಲ್ಲಿ ಪ್ರಫುಲ್ಲವಾದದ್ದೇನೆಂದು.

ಹೃದಯದಲ್ಲೇನಿದೆಯೆಂದು ಕದ್ದು ಓದುವವರಿಲ್ಲ
ಕತ್ತಲೆಯಲೂ ಕಾಣ್ಬಲ್ಲರು ಅನುಭವ ಬಲ್ಲ ಬಲ್ಲಿದರು,
ಅಂತರಾಳದಲಿ ನಿನ್ನ ಬಗ್ಗೆ ನನಗೆ ಸದಾ ವಸಂತ
ಮಾಸವೇನಾದರೂ ಮಾಸಲೊಲ್ಲದು ನಮ್ಮ ಅಸೇಚನ ಕ್ಷಣಗಳು.

ಏನು ಮಾಡಲಿ ಹೇಳು? - ನೆನಪಿಗೆ ನಲಿವುಂಟು - ನೋವೂ ಉಂಟು
ಈ ಕ್ಷಣದಿ ಹೀಗಿದ್ದರೆ, ಸದಾ ಹೀಗಿರುವುದೆಂದಲ್ಲ,
ಕಾಣದೇ ಕುಳಿತ ಆ ದೇವರನ್ನೇ ನಂಬುವಾಗ
ಕಂಡು - ಕಣ್ತಪ್ಪಿ ಹೋಗಿರುವೆ ನೀನು - ನಿನ್ನ ಮರಯಲಾರೆ.

Tuesday, June 23, 2009

ನನ್ನ ಮೌನ

ನಾನು, ನನ್ನ, ನನಗಾಗಬೇಕೆಂದು
ನನ್ನದೆಲ್ಲವನ್ಹೊರುತಿಲ್ಲ ನಾನು
ನನ್ನದಿರಲೆಂದು ನಾನುಳಿಯಲೆಂದು
ಇವೆಲ್ಲವ ನನ್ನದಾಗಿಸಿಲ್ಲ ನಾನು.

ಏನೋ ಕುಣಿದೆ, ಕುಣಿದು ಕುಪ್ಪಳಿಸಿದೆ
ನಾಟ್ಯದ ಹೆಸರು ಕಟ್ಟಲಲ್ಲ ಇದರುದ್ದೇಶ,
ಕೋಟಿ ಜನರ ನಡುವೆ ಕೋಟಿಯೊಂದಾಗಳಿಯುವೆ
ಉಳಿಯುವುದು ಭೂಮಿ ಎಂಬುದೆಲ್ಲವು ಗೊತ್ತು!

ರೊಚ್ಚ ಹೊದ್ದಿರುವೆ, ಹಟಸಾಧಿಸಿರುವೆನೆಂದೊಡೆ
ಅಹಂಕಾರಿಯಲ್ಲ ನಾನು, ಅದರ ಹಂಗಿಲ್ಲ;
ಭಾವನಾವೇಶದಲಿ ತಪ್ಪು, ಭರವಸೆಯಲಿ ಒಪ್ಪೆ -
ನಿಸಿರುವುದ ಹಿಡಿದಿರುವೆ, ನನ್ನದೆಂಬುದಲ್ಲ!

ಮೌನ ಸದಾಗಲು ಹೌದೆನುವುದಿಲ್ಲ
ಅನೇಕ ವೇಳೆಯಲಿ ಏಕೋ ಮಾತು ಬೇಸರ
ಮನದೊಳಗೇ ಮಾತಿಲ್ಲ - ಹೊರ ಬರಲುಬಹುದೆ
ಆಡಂಬರವಾದೀತು ಎಂದು ಸುಮ್ಮನಿದ್ದುಬಿಡುವೆ.

ನನ್ನ ಸೀಳಿ ನೋಡುವೆ, ಅರ್ಥೈಸದಾಗಿದೆ
ಬಿರುದಗಳ ಹೊದ್ದಿಸಿರುವರಿಗೇನ್ಹೇಳಲಿ
ತಪ್ಪಾಯಿತೆ - ನನ್ನಿಂದ? ಅವರಿಂದ? ಎಂಬ -
ದ್ವಂದ್ವದಲಿ ಬಳಲಿ ಮೌನಿಯಾಗುತಲಿರುವೆ.

Monday, June 22, 2009

ಮುಸುಕು

ಏನೋ ಭ್ರಾಂತಿ! ಅಲ್ಲಲ್ಲೆ ಮೊಳೆತಂತೆ
ಮನಸ್ಸಿನ ಮೂಲೆಗಳ ಕುಟ್ಟಿ ನೋಡಲು
ಜಡ್ಡ್ಹಿಡಿದು ಉದುರುವ ಕಲ್ಪನೆಗಳು
ಬಿದ್ದಂತೆಯೇ ಮೇಲೆದ್ದು, ಮೊಳಕೆಯೊಡೆದು
ಹೊಸ ದಂತಕಥೆಯ ರಚಿಸುತ್ತ ಬಾಳಿಗೆ,
ಗಾಳಿಗೆ ಗೋಡೆಯನೊಡ್ಡಿ ತಡೆಹಿಡಿಯಬಲ್ಲ
ಆ ನಂಬಿಕೆಯಂತೆ ಉದ್ಭವಿಸಹತ್ತಿದೆ;
ಇದರ ವೀರ್ಯೋತ್ಪನ್ನ - ತತ್ತಿ ಸಮಾಗಮ
ಎಲ್ಲಿದೆಯೆಂದು ಹುಡುಕಾಡಿದರೆ ನಗೆ -
ಪಾಟಲಾದೀತು ಎಂದು ಸುಮ್ಮನಿದೆ ಸತ್ಯ.
ಯಾವುದೀ ದೇಶ? ಯಾವುದೀ ಜಾಗ?
ಎಲ್ಲವು ಕಲಸುಮೇಲೊಗ್ಗರದಂತಾಗಿದೆ
ಇದ್ದಂತೆ ಇಲ್ಲಿ, ನಡೆದಂತೆ ಅಲ್ಲಿ, ಎಲ್ಲೋ -
ಯೋಚನೆಗಳ ಮಾಲೆ ಬಿಚ್ಚ ಹತ್ತಿದೆ.
ಪುಟಗಳೆಲ್ಲ ಹಿಂದು ಮುಂದಾಗಿ ತಪ್ಪಿ
-ಹೋಗುವ ಕಥೆಯಂತೆ ಜಟಿಲವಾಗುತ್ತಿದೆ ನಿಯಮ!
ಆಶಾಭಾವನೆ-ನಂಬಿಕೆ, ಒಳಗೊಳಗೆ ಹೊಸೆದು
ಬೇರ್ಪಡಿಸದಂತಾಗಿದೆ-ಎಲ್ಲ ಕಲ್ಪನೆಯಂತಾಗಿದೆ.
ಯಾವುದೊಂದು ನಿರ್ಧಾರವಾಗದೆ ಇಂದು
ಬಾಳೆಲ್ಲ ಮುಸುಕಾಗಿದೆ, ಮುಸುಕು ಹೊದ್ದಿದೆ.

Friday, June 19, 2009

ಎಲ್ಲಿದೆ ದೂರದೃಷ್ಟಿ?

ಕುಲವು ಕಳಶವಾಗಿ ಜಾತಿ ಜ್ಯೋತಿಯಾದಾಗ
ಉರಿವ ಎಲ್ಲಾ ಹೋಮ ಧೂಮಕ್ಕೂ ಬೆಲೆಯಾವುದು?
ಮನವು ಮುಚ್ಚಿರಲು ಹೃದಯ ಅಡಗಿರಲು
ಆಡುವ ಎಲ್ಲಾ ಮಾತಿನ ಓಘಕ್ಕೆ ಅರ್ಥ ಯಾವುದು?

ಕಾಲ-ದೇಶಗಳ ಬದಲಿಸಿದಂದು, ವಿಚಾರಯಾಗಕ್ಕೆ
ತಾನಾಗಿಯೆ ಅರಿಯದಂತೆ ಹೊಸ ನಿಟ್ಟು ಬರುವುದೆ?
ಆಡಂಬರದಿ ಅಂಬರ ಮಳೆಯ ಹೆಸರ ಬರೆಯಲು
ಈ ಭುವಿಯ ಹಾಸಿಗೆಗೆ ಹಸಿರು ಪಚ್ಚೆ ಮುಚ್ಚುವುದೆ?

ನಾಟಕೀಯತೆಯ ತೆಳು ಪರದೆಯ ಹಿಂದೆ ಬೆಳೆವ ಸ್ನೇಹಕ್ಕೆ
ಆಪ್ತತೆಯ ಆಜನ್ಮ ಋಣಾನುಬಂಧ ಬೆಳೆವುದೆ?
ಕಾಮಕ್ಕಾಗಿಯೇ ಕುಳಿತ ಪ್ರೀತಿಯಾತುರತೆಗೆ
ಒಮ್ಮೆಯಾದರೂ ಪರಸ್ಪರತೆಯ ಭಾವ ಬರಬಹುದೆ?

ಬುಧ್ಧಿಯನೆಲ್ಲ ಮಾನವರಿಗೆ ಕೊಟ್ಟ ಭಗವಂತ
ಲಗಾಮು ಮಾಯಮಾಡಿ - ನೀವೆ ಸೃಷ್ಟಿಸಿ ಎನಲು
ಹಾದಿಯುದ್ದಕ್ಕೂ ಹಾದಿ ಕವಣೆಗಳಿದ್ದಲ್ಲಿ
ಎಲ್ಲಿ ಬಂದೀತು ಎಮಗೆ ದೂರದೃಷ್ಟಿ?

Thursday, June 18, 2009

ನಿಶ್ಚಿತ

ಚಿಂತೆ - ನೆನಪುಗಳಿಗೆ ತೆಕ್ಕೆಯೊಡ್ಡಿ
ಹಳೆಯ ಕಡತಗಳ ಧೂಳ್ಹೊಡೆದು ತೆಗೆದು
ಒಂದೊಂದನ್ನೇ ಜಾಡಿಸಿ - ದೃಷ್ಟಿ ಹಾಯಿಸಿ
ಇದು ಇರಲಿ, ಇದೂ ಇರಲಿ ಎಂದು
ಎಲ್ಲವನ್ನು ಪುನಃ ಮನದಲ್ಲಿ ಪ್ರತಿಷ್ಟಾಪಿಸಿ
ನಕ್ಕು ಕೆಲವಕ್ಕೆ, ಅಳುತ ಅದು-ಇದಕ್ಕೆ
ಮಿಗಿಲಾಗಿ ಕಳೆಯದೆ ಇಲ್ಲಿಯ ತನಕ ಬಂದ
ಜೀವನದ ಬಂಧಗಳಿಗೆ ಏನೋ ಕಥೆಯ ಕಟ್ಟಿ
ನಾಳೆಯಿದೆಯೆಂಬ ವಿಶ್ವಾಸವಿಲ್ಲದ ನಂಬಿಕೆಯಲಿ
ಹೇಗೋ ತೆವಳುತ್ತ ಹೆಜ್ಜೆ ಒಂದೊಂದ ಎತ್ತಿಡುತ
ಬೇಸರವಿಲ್ಲದ, ಸುಖವಿಲ್ಲದ ಗಳಿಗೆಗಳ
ಮೂಗಿನವರೆಗೂ ಅನುಭವಿಸಿರುವಂದು
ಹೊಸದೊಂದು ವ್ಯಥೆಗೆ ಹೊಸ ಅಧ್ಯಾಯದ
ರಚನೆಯೇ ಬೇಡ, ಎಲ್ಲವೂ ಆಗಿಹೋಗಿದೆ ಎಂದು
ಎಲ್ಲವೂ ಪುನರುಚ್ಚಾರವೆಂದು - ನಡೆಸುತಲಿದೆ.
ಬೇರಿನಲಿ ವಿಷವಿಟ್ಟು ಹಸಿರ ಹೊಮ್ಮಿಸುವ
ಆ ಫಲಿಸದ ಆಸೆಯ ವಸಂತವಾಗಿಸ ಬಯಸಿ
ನೆಲಕಚ್ಚಿದ್ದಕ್ಕೆ ವ್ಯಥೆಯೇ ಇಲ್ಲ - ಎಲ್ಲವೂ ನಿಶ್ಚಿತ!

Wednesday, June 17, 2009

ಹಾಗೆಯೇ ಕುಳಿತ್ತಿದ್ದಾಗ

ಎಂಥದೀ ಮೌನ, ಮನವೆಲ್ಲ ಭಣಭಣ
ಸಾಗರದಲೆಗಳೆಲ್ಲವೂ ನಿಂತಲ್ಲೇ ಸ್ಥಿತವಾಗೆ
ಗಾಳಿಗೇಕೋ ಇಂದು ಬಿಡುವು - ಸುಂಯ್ಗುಡಲು.
ಎಲ್ಲ ಚಲತೆಗಳಲ್ಲಿಯೂ ನಿಶ್ಚಲತೆಯ ಅವತಾರವಾಗೆ
ಮೆತ್ತಗೆ ಸುಳಿಯುತ್ತಿದೆ ಅದೇ ಮುಖ - ಕೆಣಕಿನಲಿ.
ಈಗಿಲ್ಲ ಹಿಂದಿನಂತಹ ನವಿರು, ಪುಳಕಗಳು
ಶಾಂತತೆಯ ಹರುಷವಾಗಿಸಬಲ್ಲ ನೆನಪುಗಳಿದ್ದರೂ
ಸಂತಸ ಹಾಯಬಲ್ಲ ನಿಜಾಂಶವಿಲ್ಲ - ಅದರ ಸುಳಿವಿಲ್ಲ.
ನಕ್ಕಿದ್ದೂ ಆಗಿದೆ, ಅತ್ತಿದ್ದೂ ಆಗಿದೆ, ಈ ಭಾವಗಳೇನೋ -
ಮನದ ನಿಲುಕಿನಾಚೆ ಎಲ್ಲೋ ತೋರುತ್ತಲಿದೆ.
ಅದೇ - ಮರೀಚಿಕೆಯಾಗಿ, ದಿಗಂತವಾಗಿ, ಅನಂತವಾಗಿದೆ.
ಹಿಂದೆಲ್ಲ ಕ್ಷಣಕ್ಕೊಮ್ಮೆ ಸಲಿಗೆಯಿಂದ ಒಡನಿದ್ದ -
ಕೂಗಿದೊಡನೆ ಓಗೊಡುತ್ತಿದ್ದ ಆ ಸುಖ
ಇಂದು ಮಲಗಿಬಿಟ್ಟಿದೆ, ಎಚ್ಚರಿಸಲು ಸಾಧ್ಯವೇ ಇಲ್ಲ.

Tuesday, June 16, 2009

ಕರ್ಮದ ಜನರು

ಕನಸ ಬತ್ತಲು ಮಾಡಿ ನೋಡಿದರೆ
ಎಳೆ ಎಳೆಯಲ್ಲೂ ಸೌಂದರ್ಯ
ಮನಸ ಬತ್ತಲುಗೊಳಿಸಿ ಹುಡುಕಾಡಿದರೆ
ಆಳದಲೆಲ್ಲವೂ ವಿಪರ್ಯಾಸ.
ಬಂಜರು ಎದೆಯೊಳಗೆ ಬಳ್ಳಿ ಬೇರಿಟ್ಟು
ಹೂ ಬಿಟ್ಟು ನಗುತ್ತಿದೆಯೆನಲು
ಹೊನಲ ಬಿರುಗಾಳಿ ಅಲೆಗಳನಿಟ್ಟು
ಚೂ-ಬಿಟ್ಟಿದೆ ಕುಹಕದನಲ.
ನಗರದ ಕತ್ತಲ ಸೀಳಿ ಬಾನಿಗೆ ಮೊರೆಯ
-ನೊಡ್ಡಿರುವ ನರಿಯ ದನಿಗೆ
ಛೀ-ಕಾರವ ಹಾಕಿರುವ ಜನಕೋಟಿಯ
ಭಾವಗಳ ಕೆದೆಕಿ ನೋಡಿದರೆ
ನೂರಾರು ನರಿಗಳ ಕೂಗಾಟ -
ಮೂರ್ಚೆ ಹೋಗುವ ಕನಸ ನಡುವೆ
ಸತ್ತು ಬಿದ್ದ ಮನಸ್ಸಿನ ಅಂತಿಮದ ಪಯಣಕ್ಕೆ
ಹೆಣವ ಹೊರಲು ಬಾಳಿನ ಬಿದಿರು
ಭುಜವೊಡ್ಡಲು ಕರ್ಮದ ಜನರು!

Monday, June 15, 2009

ಪ್ರೇತ

ಮನೋಮಹಲ್ಲಿನಲ್ಲಿ ನಾನೊಬ್ಬ ಪ್ರೇತವಿದ್ದಂತೆ
ಗೋಡೆಗಳ ಮೇಲೆ ನನ್ನ ನೆರಳನ್ನೇ ನೋಡುತ್ತ
ಕಳೆದು ಹೋದನಂತರ ತಪ್ಪಿನ ಅರಿವಾಗಿ ಪರಿತಪಿಸುತ
ಎದೆಯ ಮೇಲೆ ನನ್ನ ತಪ್ಪನ್ನ ಬರೆದು ಯಾರೋ ಅಂಟಿಸಿದ್ದಾರೆ
ಈಗ ನಾನೊಬ್ಬ ಆಯಮವಿಲ್ಲದ ಪೇತ!

ಹೊಗೆಯಾಡುತ್ತಿದೆ ಸುತ್ತೆಲ್ಲ ಮನಸ್ಸು
ಅಲ್ಲಲ್ಲೇ ನೆನಪಿನ ವಸ್ತುಗಳು ಚೆಲ್ಲಾಡಿವೆ.
ಸಮಯವೊಂದೇ ತಡೆಯಿಲ್ಲದೆ ಹರಿಯುತ್ತಿದೆ
ಅದರ ಭಯವಿಲ್ಲದೆ, ಏನೂ ಮಾಡಲು ಇಚ್ಛೆಯಿಲ್ಲದೆ
ಕುಳಿತಲ್ಲೇ ಸ್ಥಿತವಾಗಿದೆ ಮನಸ್ಸು, ಒಳಗೇ ಸುಯ್ದಾಡುತ್ತಿದೆ.

ಕ್ಷಣಕ್ಕೊಂದು ಭಾವನೆ, ದಿನಕ್ಕೊಂದು ತರಹ
ಎಂತದೋ ನಿರಾಸೆ ಬೆನ್ನ ಬಡಿಯುತ್ತಲೇ ಇದೆ
ಹ್ಞ! ಸಿಕ್ಕಿತೆಂದೊಡೆ ಹರುಷದ ಎಸಳು
ಮಿಂಚಿನಂತೆ ಮಾಯವಾಗಿ, ಮತ್ತೆ ಅಲ್ಲೆಲ್ಲ ಕತ್ತಲು
ನೆರಳನ್ನೇ ಅಪ್ಪಿ ಅಳುವಂತಾಗಿದೆ - ಈ ಪ್ರೇತ ಜೀವನ.

Sunday, June 14, 2009

ಕಲ್ಲಿನಲಿ ಕೆತ್ತಿದ ಪ್ರೀತಿ

ನಾನು - ನೀನು ಇರಬಹುದೇನೋ ನೂರು ವರುಷ
ಅಥವ ಅದರ ಅರ್ಧ ಬದುಕಬಹುದು,
ಆದರೆ ನನ್ನ ಮನಸ್ಸಿನಲ್ಲಿ ನಿನ್ನ ಬಗ್ಗೆ ಇರುವ ಪ್ರೀತಿ
ಕಲ್ಲಿನಲಿ ಕೆತ್ತಿದಂತ ಪ್ರೀತಿ.
ವರುಷ ಸವೆದರೂ ಸವೆಯಲಾರದ -
ನಿನ್ನ ಬಳಿ ಕೆತ್ತಿದ್ದೇನೆ ಪ್ರೀತಿ ನನ್ನದನ್ನ.
ನಾ ಚಿಕ್ಕವನಿದ್ದಾಗ ಎಲ್ಲೋ ಒಂದು ಕಲ್ಲಿನ ಮೇಲೆ
ಇದೇ ಬಗೆಗಿನ ಎರಡು ಹೆಸರ ನೋಡಿದ್ದೆ.
ಕಲ್ಲು ಹೇಳಿದ ಕಥೆ! ನೋವಿಲ್ಲ - ನಲಿವಿಲ್ಲ
ಆದರೂ ಕೂಡ ಕೇಳಿದ ಮನಸ್ಸಿನಲ್ಲಿ ಏನೋ ಪುಳಕ - ನವಿರು,
ಅಂತಹ ಅಮರ ಪ್ರೀತಿಯ ನಾ ಕಲ್ಲಿನಲ್ಲಿ ಕೆತ್ತಿದ್ದೇನೆ.
ಬಿರುಸು ಗಾಳಿಯಾದರೇನು, ವರ್ಷೋದ್ಗಾರವಾದರೇನು
ಗುಡುಗು, ಮಿಂಚು, ಸಿಡಿಲುಗಳೆಲ್ಲವೂ ತುಚ್ಛ
ಗಟ್ಟಿಯಾದ ನಮ್ಮ ಪ್ರೀತಿಯ ಎದುರು.
ಪ್ರಪಂಚ ಬಡಿದು, ಕುಣಿದು, ಹುಚ್ಚಾಗಲಿ
ಕಲ್ಲಿನೊಳಗಿನ ನಮ್ಮ ಹೃದಯ, ಪ್ರೀತಿಯ ಚಿಪ್ಪಿನೊಳಗೆ
ಮಧುರ ಬಾಂಧವ್ಯವ ಸದಾ ಅನಿಭವಿಸಲೆಂದು
ಕಲ್ಲಿನಲಿ ಕೆತ್ತಿದ್ದೇನೆ ನಮ್ಮ ಪ್ರೀತಿಯನ್ನ!

Friday, June 12, 2009

ಬೆಳಕು - ನೆರಳು

ಬೆಳಕ ಕೊಟ್ಟ ಸೂರ್ಯನೇ ನೆರಳನ್ನೂ ಇಟ್ಟ
ಬೆಳಕ ಮುಂದೆ ನೆರಳೋ? ಇಲ್ಲ ನೆರಳನೋಡಿಸುವುದಕ್ಕೋ!
ನೆರಳ ಬೆನ್ನಿನಲ್ಲಿ ನಮ್ಮದೇ ಮೂರ್ತಿ
ಅದರ ಹಿಂದೆ ಬೆಳಗುವುದು ಬೆಳಕು
ಬಾಳಿನಾಶಾಗಳಿಗೆಗಳ ಪಕ್ಕದಲ್ಲೇ ಪಕ್ಕೆತಿವಿಯುವ ಭೀತಿ
ಶುಭಾಶುಭಗಳ ಮಿಲನ ಸ್ಥಳದಲ್ಲಿ ಸದಾ ಕತ್ತಲು
ಹೀಗೆ ಬೆಳಕು-ನೆರಳ ಮಿಲನವೂ ಸಹ.
ಚರ್ಯೆಯಿಲ್ಲದ ಆಕಾರವ ಹೊಂದಿರುವ
ನೆರಳೇ ಮೇಲಲ್ಲವೆ - ನಮ್ಮ ವಿಲಕ್ಷಣ ರೂಪಕ್ಕಿಂತ
ಮಾತೂ ಸಹ ಇಲ್ಲ, ಜೊತೆಗೆ ಚಲನೆ ನಮ್ಮಲ್ಲೇ ಸ್ಥಿತ.
ದಾರಿಹೋಕರು ತುಳಿದಾಡಿದರೆ ನೋವಾಗದು ಅದಕೆ
ಕೊಚ್ಚಿ ತುಂಡರಿಸಿದರೂ ರಕುತ ಹೊಮ್ಮಿ ಹರಿಯದು,
ಬೆನ್ನು ಕಾಯಲದರ ಬೆನ್ನ ಹಿಂದೆಯೇ ನಾವು
ಅಪ್ಪಿ ಸಲಹಲದನು ಭೂಮಿ, ಗೋಡೆ, ಇತ್ಯಾದಿ.
ಇವೆಲ್ಲ ಏನಾದರೂ ಇರಲಿ, ನಮ್ಮದೊಂದು ಹೆಮ್ಮೆ
ನಾವಿಲ್ಲದೆ ನೆರಳಿಲ್ಲ!
ಅದಕ್ಕಿಂತ ಹೆಚ್ಚಾಗಿ-
ಸೂರ್ಯನಿಲ್ಲದೆ ನಾವೂ ಇಲ್ಲ - ನೆರಳೂ ಇಲ್ಲ.

Thursday, June 11, 2009

ಮೀರಿದ ಎಣಿಕೆ

ಸೀಳ್ಬಿಟ್ಟಿದೆ ಹೃದಯ
ಬೆಸುಗೆಯೊಲುಮೆ ಎಲ್ಲಿದೆಯೊ ಕಾಣೆ.

ಮರಗಟ್ಟಿ ಹೋಗಿದೆ ಮಂಜಿನಲ್ಲಿ
ಎಲೆ ಉದುರಿನಿಂತ ಬಂಜರು ಮರ
ಎಳೆ ಬಿಸಿಲಿಗೆ ಕಾಯುತಲಿದೆ
ಶೀತಲದ ಇರುಳ ನಡುವೆ - ಹಗಲುಗನಸು!

ಜೀವವ ಚಿವುಟಿಹೋದ ವಿರಸ
ಒಲವ ವಿಪರ್ಯಾಸವಾಗುತ ಬಂದು
ತಪ್ಪೆಂಬುದ ಅರಿತಿದ್ದರೂ ಸಹ
ಹೃದಯವನ್ನ ಒಡೆಯುತ ಬಂತು.

ಚಂದಿರನ ಹಾಳೆ ತೆಗೆದು ಬಿಟ್ಟರೆ
ನಡುಕ ತರುವ ಆ ಕರಾಳ ರಾತ್ರಿ
ನೆನಪಿನ ಮಿನಿಗು ನಕ್ಷತ್ರಗಳು
ಮುಗಿಲೆಲ್ಲ ಹರಡಿವೆ, ಎಣಿಕೆ ಮೀರಿವೆ.

ನೀನಿಲ್ಲದ ದಿನಗಳು

ನೀನಿಲ್ಲದ ದಿನಗಳಲ್ಲಿ
ನಿನ್ನ ಅನಿಸಿಕೆಗಳು ಹೀಗಿದ್ದವು;
ಶೂನ್ಯ ಸದೃಶವೀ ಗಗನ
ಮಲಗಿ ನಿದ್ರಿಸುವುದೀ ಭುವನ.

ಚಂದಿರನ ಬೆಳದಿಂಗಳ ಗರ್ಭದಲ್ಲಿ
ಇರುಳು ಕಳೆಯ ಕಳೆದು ನಿದ್ರಿಸುತಿತ್ತು,
ಹೃದಯ ಬಡಿತಗಳಿಗೆಲ್ಲವು ಇಂದು
ವಿರಹವೇ ಆಗಿ - ಅಳಹತ್ತಿತ್ತು,
ನೀನಿಲ್ಲದಂದು ದೊರಕುವುದಾದರೂ ಹೇಗೆ
ಪ್ರೀತಿ, ಪೂಜೆ ಹಾಗು ಸಂತಸವು?

ನೊಂದ ಈ ನನ್ನ ಕಣ್ಣು
ನಿನ್ನ ನೆನಸಿನಲ್ಲಿ ಬತ್ತಿ ಹೋಗಿತ್ತು,
ಗಾಳಿಯ ಪ್ರತಿ ಮಿಳಿತದಲ್ಲೂ ಸಹ
ಕಂಬನಿಯು ನಿನ್ನ ನೆನಪಿನಲ್ಲಿ ಈಜುತಿತ್ತು,
ನೀನಿಲ್ಲದೆ ನಗುವುದಾದರು ಹೇಗೆ
ಕನಸ ಕುಸುಮದಲ್ಲಿರುವ ಈ ಕಣ್ಣು?

ನೀನಿಲ್ಲದ ದಿನಗಳಲ್ಲಿ
ನನ್ನ ನಂಬಿಕೆಗಳೆಲ್ಲವು ಮುಗಿದಿದ್ದವು;
ಶೂನ್ಯ ಸದೃಶವಾಗಿತ್ತು ಮನಸು
ಹೃದಯಕ್ಕೆ ಅಳುವುದೇ ಸೊಗಸು!

(ಹಿಂದಿ ಕವವೊಂದರಿಂದ ಪ್ರೇರಿತವಾದದ್ದು)

Wednesday, June 10, 2009

ಪ್ರೀತಿಯ ಮುಡಿಪು

ನಿನ್ನ ದಿನಚರಿಯಲ್ಲಿ ಕದ್ದ ಕೆಲವು ಕ್ಷಣಗಳು ಮಾತ್ರ
ನಾನು ನಿನ್ನೊಂದಿಗೆ ಕಳೆದುದಾಗಿದೆ.
ನಿನಗೆ ನಿನ್ನವರದೇ ಧ್ಯಾನ, ಅವರಿಗೆ ನಿನ್ನದೇ ನೆರಳು
ತಡೆಯಲು ಯತ್ನಿಸಿರುವೆ ನಾನು
ನಿನ್ನ ಪಟ್ಟಿಯಲ್ಲಿ ಕಡೆಯವಳಾಗಿ;
ಯಾರೊಬ್ಬಳಿಗೂ ಎರಡು ಹೃದಯಗಳಿಲ್ಲ
ಹಾಗಾಗಿ ನನ್ನೆಲ್ಲ ಪ್ರೀತಿಯನ್ನ ನಿನಗಾಗಿ ಕಾಪಾಡುತಲಿದ್ದೇನೆ.

ಒಬ್ಬರನ್ನೊಬ್ಬರು ಅರಿತು ಬಾಳ್ವುದು ಎಷ್ಟು ಹಗುರ
ನನ್ನೆಲ್ಲ ಸಖಿಯರೂ ಸಹ ನನ್ನ-ನಿನ್ನ ಬಗ್ಗೆ ಹೇಳುತಲಿದ್ದಾರೆ.
ಪ್ರತಿ ಬಾರಿಯು ಸಹ ನನ್ನೊಳಗಳವ ಬಲಗೊಡಿಸುವ -
ಪ್ರಯತ್ನಗಳೆಲ್ಲಾ ಅತ್ತದ್ದೇ ಆಗಿದೆ.
ನನಗೆ ನಿನ್ನ ಸನಿಹದ ಸ್ಪರ್ಶವೇ ಸದಾಗಲೂ ಬೇಕು
ಅದು ನನ್ನ ಮನೆಯ ಬೆಳಗಬೇಕು -
ಹಾಗಾಗಿ ನನ್ನೆಲ್ಲ ಪ್ರೀತಿಯನ್ನ ನಿನಗಾಗಿ ಕಾಪಾಡುತಲಿದ್ದೇನೆ.

ನೀನು ನನಗೆ ಹೇಳುತಲಿರುವೆ ಸದಾ - ಸಮಯ ಬರಲೆಂದು
ಅದು ಸುಳ್ಳಿನಂತಾಗಿದೆ, ಅದಕೆ ಅರ್ಥವಿಲ್ಲದಾಗಿದೆ;
ನೀನು ಹೇಳುತಿರುವೆ ಈಗ ಸಂಯಮವಿರಲೆಂದು.
ಕಾಯಬೇಕು ಸ್ವಲ್ಪ ಸಮಯ ಎಂಬುದೆಲ್ಲ ಮಿಥ್ಯೆ
ಆಶೆಗಳಿಗೆ ಭಾವಬೇಕು ಆಗ ನಾನು ಬರಲೇಬೇಕು,
ಎದೆ ತೆರೆದಿದೆ, ಇರುಳಾಗಿದೆ ಬಾ ಒಲವಿನಲ್ಲಿ ಮೀಯುವ
ಹಾಗಾಗಿ ನನ್ನೆಲ್ಲ ಪ್ರೀತಿಯನ್ನ ನಿನಗಾಗಿ ಕಾಪಾಡುತಲಿದ್ದೇನೆ.

ಈ ಇರುಳ ತಾಳಲಾರೆ, ನನಗೆ ಬೇಕು ನೀನು
ರಾತ್ರಿಯೆಲ್ಲ ತೆಕ್ಕೆಯ ಸುಖ ಬೇಕೇ ಬೇಕು,
ನಾನಿನ್ನು ಉಳಿಯಬೇಕಾದರೆ ಬೇಗ ಬಾ
ಇನ್ನ್ಯಾವ ಹೆಣ್ಣೂ ಕಾಯಲಾರಳು ನನ್ನ ರೀತಿಯಲ್ಲಿ
ನಾನು ಬದುಕಬೇಕಾದರೆ ಪ್ರೀತಿಬೇಕು ನಿನ್ನದು
ರಾತ್ರಿಯ ಚಳಿಯು ಬೆಚ್ಚಗಾಗಲು ನೀ-ಬೇಕು
ಹಾಗಾಗಿ ನನ್ನೆಲ್ಲ ಪ್ರೀತಿಯನ್ನ ನಿನಗಾಗಿ ಕಾಪಾಡುತಲಿದ್ದೇನೆ.

(ಆಂಗ್ಲ ಕವನವೊಂದರಿಂದ ಪ್ರೇರಿತವಾದದ್ದು)

Tuesday, June 9, 2009

ಬಿಕ್ಕು

ಮಾತೇ ಇಲ್ಲದೆ ಹಗಲು-ರಾತ್ರಿ
ನೆನಪಿನ ಕಣ್ಣೀರನ್ನ ಹರಿಸುತ್ತಲೇ ಇದೆ
ಆಶಾ ಭಾವನೆಯಿಂದಿದ್ದ ಆ
ಸೊಗಸು ದಿನಗಳ ನೆನಸಿನಲ್ಲಿ
ಮರುಗುತ್ತಲೇ ಇದೆ.

ಇರುಳು ಕಟ್ಟಿದ ಕತ್ತಲೆಗಳಲಿ
ಸೊಂಪಿನ ಕನಸುಗಳು ಬರುತಲಿತ್ತು,
ಹಗಲು ಬಿತ್ತಿದ ನಂಬಿಕೆಯಲಿ
ಇಂಪು ಹರಡಿತ್ತು, ಮನಃಪಟಲದಿ-
ಎಲ್ಲವೂ ಸೊಗಸೇ ಇತ್ತು.

ಸುಖದ ಚಹರೆಗಳು ಮೂರ್ತಿವೆತ್ತು
ಹಗಲಿಗೆ ಬೆಳಕನೇಯುತ್ತಿತ್ತು,
ಅನಂತದಲಿ ಭರವಸೆಯ ಅಭಿಷೇಕ
ಬೆಳಕ ಬಿಲ್ಲ ಸಿಂಪಡಿಸಿತ್ತು
ಅಲ್ಲೆಲ್ಲ ಮನಸ ನಂಬಿಕೆಯಿತ್ತು.

ಬಾಳ ಸೊಗಸ ನಂಬಿಕೆಯಲಿ
ಬಯಕೆ ಫಸಿಲು ಬೆಳೆಯುತ ಬಂತು,
ಹಗಲು ಕಪ್ಪಿಟ್ಟು ಕತ್ತಲೆ ಕರಾಳವಾಗಿ
ಮಾತಿಗೆಲ್ಲವು ಮಮತೆ ಬದಲು
ಅಮಲೇ ತುಂಬಿತ್ತು.

ಬಿತ್ತರಿಸಿ ಬಂದ ಕುಹಕದುಡಿಗೆ
ಮೈಯನೆಲ್ಲ ಗಟ್ಟಿ ತಬ್ಬಿ
ಉಬ್ಬಿ ಕುಳಿತಿದ್ದ ಊಹೆಗಳಿಗೆ
ಮಸಿಯ ಬಳಿದಿತ್ತು, ಆಗ -
ಆಶೆ ಸತ್ತಿತ್ತು.

ಮಾತೇ ಇಲ್ಲದೆ ಹಗಲು-ರಾತ್ರಿ
ನೆನಪಿನ ಕಣ್ಣೀರನ್ನ ಹರಿಸುತ್ತಲೇ ಇದೆ
ಆಶಾ ಭಾವನೆಯಿಂದಿದ್ದ ಆ
ಸೊಗಸು ದಿನಗಳ ನೆನಸಿನಲ್ಲಿ
ಈಗ ಬಿಕ್ಕುತ್ತಲಿದೆ.

ಬಾಳಛಾಯೆ

ಭಾವುಕತೆಯ ಬೀದಿಯಲಿ ಸನಿಹ ಬಂದರೂ
ದೂರವೇ ಸರಿದಿರ್ಪ ನಿತ್ಯ ಮಾಯೆಯ ತರ್ಕ
ತುಕ್ಕಾಗುತ ಬಂದು ಅಂಶಗಳ ಮಣ್ಣುಮಾಡಿ
ಉಳಿದಿರುವ ನಿರ್ಬಲತೆಯ ಮಾತಂಗನಿಗೊಪ್ಪಿಸಿ
ಜಢ ದೇಹವ ಬೇಯಿಸಿ ಬೂದಿ ಮಾಡುತಲಿರುವ
ಬಹುತೇಕ ಭಾವಗಳು ಬಂಜೆಯಾಗುತಲಿವೆ.

ಹೀಗೊಮ್ಮೆ ನನ್ನೊಡಲು ಅಕ್ಕರೆಯ ದನಿತೂರಿ
ಉಪಾಖ್ಯಾನದ ಸಿರಿ ಸಂತಸದಲಿ ಹಾದಿ ಮರೆತಿತ್ತು,
ತತ್ತ್ವ ಗಡಿಯೊಳಗೆ ಕೈ ಚಾಚಿ ಮೈ ಹರಡಿ
ವಿಶಾಲ ವಿಹಿತಗಳ ಪಳೆಯುಳಿಕೆ ಮೌಲ್ಯದಲಿ
ಮಾತಾಡಿ ಮನಕಸಿದು ಹಸಿಗೂಸಿಗೆಂಬಂತೆ
ಹೊಸ ಕಥೆಯ ರಚಿಸಿತ್ತು ಬಾಳ ವಿಸ್ರಂಭದಲಿ.

ಜಾತಕಗಳ ರಚಿಸಿರ್ಪ ಗ್ರಹ ನವದ ಸಂತೆ
ನಿಟ್ಟು ಅಷ್ಟದಿ ಅಳೆಯುತಿರೆ ದಿಸೆಯ
ಬಾಳಿನಾಶಭ್ರೂಣಗಳ ಹೊಸ ಹುಟ್ಟು ಹೊಸ ಆಶೆ
ಅನಿಕೇತ ಮಮತೆಗಳ ಹೊಕ್ಕಳಾಗುತ ಬಂದು
ದಿನಕೆ ದಿನಗಳ ಬಳಿದು ಮನ-ಮೌನಗಳ ಬಿತ್ತಿ
ಫಲವತ್ತು ಪೈರುಗಳ ಬೆಳೆಸಲ್ಹಂಬಲಿಸುತಿದೆ.

ದೇವನೇ ಆತ್ಮ, ಪರಮಾತ್ಮ, ಪರಮ ಪಿತೃ
ದೇವನಿಗೇ ಅರ್ಪಿತ ಸರ್ವರ ಪಿಂಡ.
ಮಾನವನ ವಿಶೇಷ ದೇವನ - ಬಹು ಭಾಷಾ, ಬಹು ವಿಧ
ನಾಮಕ್ಕೂ ಕ್ಷುಲ್ಲಕವಾದುದು ನಮ್ಮದೆಂಬ ಹೆಮ್ಮೆ
ಭಾವುಕತೆಗೆಲ್ಲಿ ಬೇಲಿ? ದೇವನೇ ಅದರಲ್ಲಿ ಬಂಧಿ
ಶ್ರೀಮಂತವೀ ಜಗತ್ತು ಬಾಳ ಛಾಯೆಗಳಲ್ಲಿ!

ಬಿಳಲು

ನನ್ನ ಆಸೆಗಳ ಮಡುವನ್ನು
ಧರಿಸಿದ್ದ ಭೂಮಿ- ನೀನೆ
ನನಗೆ ನೀನೆ ಆಸರೆ.
ಇದರ ಎತ್ತರವೆಲ್ಲ ನಿನ್ನಿಂದಲೆ,
ಬಿರಿದೆ ಎಂದರೆ ನೀನು
ಇವೆಲ್ಲಕ್ಕೂ ಪಾತಾಳ ಪರಿಚಯ.
ಬೇರಿದ್ದರೂ ಬಿಳಲಿನಾಸೆ ನನಗೆ,
ನನ್ನ ಪ್ರತಿ ಕಣವನ್ನೂ
ನಿನ್ನೊಂದಿಗೆ ಹುದುಗಿಸುವ ಧ್ಯೇಯ.
ನೀನೋ ಬಂದದ್ಡನೆಲ್ಲ ಸ್ವೀಕರಿಸುತ್ತೀ
ಎಲ್ಲಕ್ಕೂ ಆಸರೆಯಿದೆಯೆಂದು ಸಾರುತ್ತಿ.
ಆದರೂ ಏಕೆ ಹೇಳು, ನನ್ನ ಸುತ್ತ ಬಿರುಗಾಳಿ?
ಅದರ ರಭಸಕ್ಕೆ ನಾ ಮುರಿದು ಬಿದ್ದು -
ನನ್ನ-ನಿನ್ನೊಂದಿಗಿರುವ ಸಂಪರ್ಕ
ಕಡಿದು ಹೋಗುವುದಾದರು ಏಕೆ?
ನಿನ್ನಲ್ಲೋ,ಭಾರ ತಡೆಯಲಾರದೆ ಬಿರಿಯುವ
ಭೂಕಂಪ;
ಆಗಲೂ ಸಹ ನಾನೇ ನತದೃಷ್ಟ.
ನನ್ನ ಆಸರೆ ಬಿರಿದು ಹೋಗುವುದಲ್ಲ!
ನಾನು ವಿದಾಯ ಹೇಳಿದರೆ ಪರವಾಗಿಲ್ಲ-
ಭೂಮಿ ಇರುವವರಗೆ ಬೆಳೆಯಬಲ್ಲದು
ಮರ,ಮಡು - ಇನ್ನೊಂದು;
ನೀನು ವಿದಾಯ ಹೆಳಿದರೆ
ಈ ಕಲ್ಪನೆಗಳಿಗೆಲ್ಲ ಜಗತ್ತೇ ಇಲ್ಲ -
ನನ್ನ ಭಾವ ಬಿಳಲನ್ನು ಧರಿಸಬಲ್ಲ
ಭೂಮಿಯೇ ಇಲ್ಲ!