Saturday, June 22, 2013

ಪಥ್ಯ

ನನ್ನ ಹೃದಯದ
ಜೀವ ಮಿಡಿತಕೆ
ನೀನೆ ಉಸಿರು,
ಅದುವೆ ಎನ್ನ ಹೃದಯವನ್ನೆ
ಸೆಳೆಯುತಿರುವ
ಮಧುಚಂದ್ರವು-
ಪ್ರೇಮಗೀತೆಯು.

ನಿನ್ನದೇ! -
ಬೆಳದಿಂಗಳ ಕನಸು ನನ್ನಲಿ,
ಪ್ರಣಯವೇ! -
ಬಿಳಿಯ ಹಂಸ ನೃತ್ಯ ಅದರಲಿ,
ಇಳಿದು ಏರುವ
ಕಡಲ ಅಲೆಯೊಳು
ತೇಲು-ತಿರುವೆವು
ಪರಿದಲಿತ ಚುಂಬಕೆ.

ಚೆಂದದ
ಅಭಿಸರಣ ಕಾವ್ಯ ಲೋಕವು
ಅಂದದ
ಸಿಹಿಯ ಜೇನ ಪಥ್ಯ ಅದರಲು,
ಕಣ್ಣ ಕಣ್ಣೊಳು
ಕಾಣುತಿರುವೆವು
ಮಾದಕತೆಯ
ಭೋರ್ಗರೆವ ಪ್ರೀತಿಯ!

Thursday, June 20, 2013

ಹಾಡು

ಓಕುಳಿ ಅಂಬರ ಧರಿಸಿಹ ಭೂಮಿ
ಅಂಬರಾಂಗಗಳ ಚಿತ್ತಾರ,
ಶರಧಿ ಚಾದರವ ಹೊದ್ದಾ ನೆಲವಿದು
ಅನಿಶ ಎಡವನ ಪ್ರಸ್ತಾರ.

ಮೂಡಲ ಓರಣ ಮೇಡುಗಳಿಗೆ
ಬಣ್ಣವಿಹಿಸಿಹ ರವಿ ಶೋಭೆ,
ಹೂನಗೆ ಹೊಮ್ಮುವ ಔಡಲ ನೆಲವಿದು
ಜ್ಯೋತಿಷ್ಮತಿಯಲಿ ಪ್ರಭೂತೆ.

ಇರುಳು ಮಸುಕಿನ ಮಾದಕತೆಯಲಿ
ಅಭಿನವ ದುಂಬಿಯ ಝೇಂಕಾರ,
ಬೆಳಗು ಪ್ರಭುವಿನ ಸ್ಮರಣೆಯಲಿ
ತನನನ ಕುಣಿದಿಹುದೀ ದೇಹ.

ನಿನ್ನೆಯ ಕಿಂಕರದಾಚೆ ಜಾಡಿನಲಿ
ಇಂದಿನ ಹೊಸತನ ಹೊಸಚೇತ,
ಪ್ರಸ್ತುತ ಬದುಕಿನ ದಿವ್ಯಸ್ಮರಣದಿ
ಮಾಡಿ ಚಿಂತೆಗಳ ಅಂಗಾರ.

ದುಃಖ ಸುಖಗಳ ಎರಕವಾಹೊಯ್ದು
ಮೂಡಿಸಿ ಹೊಸತನ ಮನಸಿನಲಿ,
ಇಂದಿನದಿಂದಿಗೆ - ನಾಳೆ ನಾಳೆಗೆ
ಹಾಡುವ ನಾವ್ ದೇವತಾರ್ಚನೆಯಲಿ.