Tuesday, July 2, 2013

ಸೊಪ್ಪು ಮಾರುವ ಹುಡುಗಿ

ಸೊಪ್ಪು ಮಾರುವ ಹುಡುಗಿ
ತುಂಬಿದ ಬುಟ್ಟಿಯ ಹೊತ್ತು
ಒಪ್ಪು ವರ್ಣನೆಯಲಿ -
ಕೂಗ ಹಾಕಿದಳು.

ಪಾಲಾಕು, ಕಿಲ್ಕೀರೆ, ದಂಟೆಂದು
ತಿರುಗಿ ತಿರುಗಿ ಹೇಳುತ,
ಹೊಚ್ಚ ಹೊಸದು ಈ ಪಚ್ಚ -
ಹಸಿರೆಂದು - ಸಾರಿ ಹೇಳುತಿಹಳು.

ನಾಲ್ಕಾಣೆಗೆಂಟೆಂದು
ಈ ಸಿಹಿ ದಂಟೆಂದು,
ಕೊಳ್ಳಿ ಕೊಂಡುಂಡಿರೆಂದು -
ಬಗೆಯಾಗಿ ಹೇಳುತಿಹಳು.

ಕೊಳ್ಳಿರಮ್ಮ - ಕೊಳ್ಳದಿರಬೇಡಿ
ಕೂಳಿಗೆ ಕಾದಿಹ - ಕೂಸುತಮ್ಮ,
ಇಂದು ಕೊಂಡುತಿಂದರೆ
ನಾಳೆಗೆ ನೀವೆ ಕರೆವಿರೆಂದಿಹಳು.

ರೊಕ್ಕವ ಕಮ್ಮಿ ಕೊಡಬೇಡಿ
ಹರಿಸಿರುವೆ ಛಳಿಯ ಬೆವರು,
ಒಳಿತಾದ ಮನಸಿನಿಂದ ಕೊಡಿರಿ
ಇರಲಿ ಮನೆಯಲಿ ಹಾಲ್ಮೊಸರು.

ಕೊಂಡನಂತರ ಹಾಕಿಹಳು
ಬಾಯಗಲದ ನಗು -
ಬರುವೆನೆಂದು ಮುಂದೆ ಹೊರಟಿಹಳು
ಹಸಿರು - ಸೊಪ್ಪು ಮಾರುವ ಹುಡುಗಿ.

Saturday, June 22, 2013

ಪಥ್ಯ

ನನ್ನ ಹೃದಯದ
ಜೀವ ಮಿಡಿತಕೆ
ನೀನೆ ಉಸಿರು,
ಅದುವೆ ಎನ್ನ ಹೃದಯವನ್ನೆ
ಸೆಳೆಯುತಿರುವ
ಮಧುಚಂದ್ರವು-
ಪ್ರೇಮಗೀತೆಯು.

ನಿನ್ನದೇ! -
ಬೆಳದಿಂಗಳ ಕನಸು ನನ್ನಲಿ,
ಪ್ರಣಯವೇ! -
ಬಿಳಿಯ ಹಂಸ ನೃತ್ಯ ಅದರಲಿ,
ಇಳಿದು ಏರುವ
ಕಡಲ ಅಲೆಯೊಳು
ತೇಲು-ತಿರುವೆವು
ಪರಿದಲಿತ ಚುಂಬಕೆ.

ಚೆಂದದ
ಅಭಿಸರಣ ಕಾವ್ಯ ಲೋಕವು
ಅಂದದ
ಸಿಹಿಯ ಜೇನ ಪಥ್ಯ ಅದರಲು,
ಕಣ್ಣ ಕಣ್ಣೊಳು
ಕಾಣುತಿರುವೆವು
ಮಾದಕತೆಯ
ಭೋರ್ಗರೆವ ಪ್ರೀತಿಯ!

Thursday, June 20, 2013

ಹಾಡು

ಓಕುಳಿ ಅಂಬರ ಧರಿಸಿಹ ಭೂಮಿ
ಅಂಬರಾಂಗಗಳ ಚಿತ್ತಾರ,
ಶರಧಿ ಚಾದರವ ಹೊದ್ದಾ ನೆಲವಿದು
ಅನಿಶ ಎಡವನ ಪ್ರಸ್ತಾರ.

ಮೂಡಲ ಓರಣ ಮೇಡುಗಳಿಗೆ
ಬಣ್ಣವಿಹಿಸಿಹ ರವಿ ಶೋಭೆ,
ಹೂನಗೆ ಹೊಮ್ಮುವ ಔಡಲ ನೆಲವಿದು
ಜ್ಯೋತಿಷ್ಮತಿಯಲಿ ಪ್ರಭೂತೆ.

ಇರುಳು ಮಸುಕಿನ ಮಾದಕತೆಯಲಿ
ಅಭಿನವ ದುಂಬಿಯ ಝೇಂಕಾರ,
ಬೆಳಗು ಪ್ರಭುವಿನ ಸ್ಮರಣೆಯಲಿ
ತನನನ ಕುಣಿದಿಹುದೀ ದೇಹ.

ನಿನ್ನೆಯ ಕಿಂಕರದಾಚೆ ಜಾಡಿನಲಿ
ಇಂದಿನ ಹೊಸತನ ಹೊಸಚೇತ,
ಪ್ರಸ್ತುತ ಬದುಕಿನ ದಿವ್ಯಸ್ಮರಣದಿ
ಮಾಡಿ ಚಿಂತೆಗಳ ಅಂಗಾರ.

ದುಃಖ ಸುಖಗಳ ಎರಕವಾಹೊಯ್ದು
ಮೂಡಿಸಿ ಹೊಸತನ ಮನಸಿನಲಿ,
ಇಂದಿನದಿಂದಿಗೆ - ನಾಳೆ ನಾಳೆಗೆ
ಹಾಡುವ ನಾವ್ ದೇವತಾರ್ಚನೆಯಲಿ.

Saturday, May 18, 2013

ಹೊನ್ನಿನ ಉಡಿಗೆ

ಎತ್ತಿ ಕಟ್ಟುವ ಹುಚ್ಚು ಪದಗಳ
ಕೊಚ್ಚಿ ತೂರುವ ಆಸೆಯ -
ಹತ್ತಿ ಉರಿಯುವ ಬಿಚ್ಚು ಮನಗಳ
ಉಕ್ಕಿ ಕೆದಕುವ ಭಾಷೆಯ -
ಬಿತ್ತಿ ಪುಟಗಳ ಸೊಕ್ಕ ಮುರಿಯುವ
ಮುಕ್ಕಿ ತಿನ್ನುವ ಭವಗಳ -
ತಳ್ಳಿ ಬೊಗಳುವ ಮಳ್ಳಿ ಮನಸಿನ
ಸೊಲ್ಲ ಬೆಳಗುವ ಹಣತೆಯ -
ಇಲ್ಲೆ ಉದಿಸುವ ಅಲ್ಲೆ ಮುಳುಗುವ
ನಾಳಿನಾಚೆಯ ಸವಿಗಳ -
ಬೆಳಕ ಬಳಿಯುವ ನಿಶೆಯ ಅಳಿಯುವ
ನವಿರ ಹೂವಿನ ಮುದಗಳ -
ಏಕೆ ನೂಕುವೆ ನಾನೆ ಬೆರೆಯುವೆ
ನಿನ್ನ ತಿರುಳಿನ ಒಡಲಿಗೆ -
ಉಳಿವ ಹೂನಗೆ ಒಡನೆ ಬಂದೊಡೆ
ನಿನ್ನ ನಿಸ್ವನ ತವರಿಗೆ -
ಹೊರಟು ಬರುವೆನು ಮುಗಿಲ ಕರೆವೆನು
ನಿನ್ನ ಹೊನ್ನಿನ ಉಡಿಗೆಗೆ.

Sunday, January 27, 2013

ಯಾಚನೆ


ಎಲ್ಲಿ ಹುಡುಕಿದರೂ ಕಾಣದೆ
ಉಳಿದ ಹೃದಯ
ನನ್ನ ನೆರಳಾಗಿ ಸದಾಗಲು ನಲಿವ
ಉಲಿದಿಹ ಉಳಿವಾಗಿದೆ,
ಬಲ್ಲೆನ್ನೆಂಬ ಅಹಮ್ಮಿಗೆ ಬೆಂಬಲದಿ
ಉಳಿದ ಪದಗಳ ಬಳಿದು
ಕವಿತೆಯೆಂಬ ಮುಸುಕ ಹೊದಿಸಿ
ಕವಿಯೆಂಬ ಹೆಮ್ಮೆಯ ಬೆಳೆದು -
ಉಳಿದ ಹನಿ ಪ್ರೀತಿಯ ಸೇವಿಸೆ
ಎಲ್ಲ ಕಳೆದನೆಂಬ ನಿಜ -
ಉದಿಸಿ, ದುಃಖ ಬೆಳೆದಿದೆ
ನಾನಾರಿಗೆಂಬ ಶಂಕೆ ಉಳಿದಿದೆ;
ಕ್ಷಮಿಸು ಹೃದಯ ನನ್ನ -
ನಿನ್ನ ತೂರಿ ಒಗೆದಿದ್ದಕ್ಕೆ
ನಾನೆಂಬ ಊಹೆಯ ಕಟ್ಟಿದ್ದಕ್ಕೆ
ಅರ್ಥವಿಲ್ಲದ ಪದಗಳ ಹೊಸೆದಿದ್ದಕ್ಕೆ.