Saturday, September 12, 2009

ದಹನ

ಸುತ್ತ ಎತ್ತಲೂ ಬಯಲು
ನಡುವೆ ಮಾನವೀಯ - ನಾನು
ನನ್ನೊಡನಾಡಲು ವೃಕ್ಷವೊಂದು
ರೆಂಬೆ ಹರಡಿ ನಿಂತಿದೆ
ಕೆಳ ತಂಪು ಹಾಸು.
ಹಾದು ಹೋದವರಿಲ್ಲ
ಬಳಗದವರಿಲ್ಲ,
ಕೊಳಗ ನೀರಿಗಾದರೂ ಬೇಕು
ಆಕಾಶರಾಯನ ಕೃಪೆ.
ಜನ ಜಂಗುಳಿಯಿಲ್ಲಿಲ್ಲ
ಸ್ಮಶಾನ ಮೌನ, ಅದೇ ಸ್ನಾನ
ಅದೇ ನಿಸ್ವನ.
ಜನ ದೂರ ಇಹರು
ಜನ ಕ್ಷೋಭೆ ಇಲ್ಲ
ಮನ ನಲಿಸಿವ ಪ್ರೇಯಸಿಯರಿಲ್ಲ
ಪುತ್ರ ಕತೃಗಳೂ ಇಲ್ಲ.
ನಾನಾಯಿತು, ನನ್ನ ಮರ
ನನ್ನ ಈ ಎಲ್ಲೆ, ಈ ನನ್ನ ಭೂಮಿ.
ನಾ ಉಳಿಯುವುದಿಲ್ಲ, ನಾ ಬೆಳೆವುದಿಲ್ಲ
ಆಗಸದಾ ನೀರಿಗೆ ಬಾಯೊಡ್ಡುವೆ
ನನ್ನ ಮರದ ಫಲವ ಸ್ವೀಕರಿಸುವೆ
ಮನದಲಿ ನಾ ಮೆಲುಕ್ಹಾಕುವೆ.
ಪ್ರತಿ ಬಾರಿ ಸೂರ್ಯೋದಯವೂ
ಪ್ರತ್ಯುತ್ತರ ತರದ ಪ್ರಶ್ನೆ.
ಏನೋ ಕೊರತೆ, ಕಲೆತು, ಕೊಳೆತು
ಹಾದಿಯೆಲ್ಲಾ ವಾಸನೆ.
ಮನದಲಿ ಉರಿಯುವ ಬೆಂಕಿ
- ದಹನ.
ಹ್ಞಾ! ಗಾಳಿ ಬೀಸುತಿದೆ
ನನ್ನ ಮರ, ಪೋಷಾಕು ಅದಕೆ
- ತನ್ನ ಹೂವು.
ನಾ ಬೆತ್ತಲೆ!!
ಬೊಬ್ಬಿಡಲೆ, ಕಿರುಚಿಬಿಡಲೆ?
ದಿಗಂತದಲಿ ಯುವ ಜೋಡಿ!
ಶೃಂಗಾರ ಮಾಸ, ಮನಸಿನ ಹೊಸ
- ಹಾಸಿನಲಿ ತೇಲುತಿಹರು.
ಅರೆ! ಬೆಂಕಿಯಾ ಶಮನ
ಏನೋ ಸಂತಸ.
ತೊರೆದೆ, ಹೌದು ಹೋಗುತಿರುವೆ!
ಎಲ್ಲಿಗೆ? ಕಾಲ್ಗಳೇ ನಿಲ್ಲಿ!
ಇದಾವ ಪ್ರದೇಶ, ಬರೇ ಜನಗಳು
ಓ! ತಬ್ಬಿ ನಲಿಯುತಿಹರು.
ಸ್ವಾದನೆ, ಆಸ್ವಾದನೆ, ಕೈಗಳು -
ಅರೇ! ಏನೀ ಬಂಧನ!! ಯಾವುದೀಸೆರೆ.
ಯಾವುದೀ ತೆಕ್ಕೆ!
ಬಿಕ್ಕಳಿಕೆ, ಉಕ್ಕೇರುವ ಕಣ್ಣೀರು
ಹೊಸತನ, ಹೊಚ್ಚ ಹೊಸತನ;
ನನ್ನಲ್ಲೆ! ನನ್ನೊಳಗಿನ
ಅರೇ! ದಹನ!!

Thursday, September 10, 2009

ವರ್ಷ

ಮಂಪರು ನೆಲದ ಬಂಜರು ಭೂಮಿಗೆ
ಹರ್ಷವೀಯುವ ಆ ವರ್ಷ
ಸಿಂಪಡಿಸುವ ಪ್ರತಿ ಹನಿ ಹನಿಗಳಲಿ
ಸಿಹಿ ಚುಂಬನ ಆ ಮಧುಸ್ಪರ್ಶ.

ಬಳಲಿಪ ಆಸೆಯ ಬಲವಂತದ ಭವ
ಕನಸಿನ ಒಳಗಿನ ಸಿಹಿ ಜಲ್ಲೆ
ಸಿಹಿಯೊಳಗಿನ ಸವಿ ಕನಸಿನ ಅಂಕದಿ
ನಾಟಕದೊಳಗಿನ ಮಧುಮಲ್ಲೆ.

ರವಿರಂಗದ ಬಹು ರಂಗಿನ ಬಗೆಯಲಿ
ಕೆಂಪನೀಯುವ ಆ ರಂಗು
ಪ್ರೇಯಸಿ ಎದುರಿನ ಮುದಗಳ ವಚನದಿ
ಪ್ರೇಯಸಿ ನೀಡುವ ಮುದರಂಗು.

Monday, September 7, 2009

ಕನಸು

ಒಮ್ಮೆ ಬಂದು ಹೋಗಿ
ಮತ್ತೊಮ್ಮೆ ಬಾರದಿಹ
ಎಂಥದೋ ಕನಸುಗಳು
ಕಾಡುತಿವೆ ಎನ್ನ.

ಚೈತ್ರ ಋತು ಬಂದಾಗ
ವಸಂತದಾ ಕನಸು
ಋತುಮಾನ ರಂಗಿನ
ಮನಸಿನಾ ಭ್ರಮಿಸು,
ಉಳು ನೇಗಿಲ ಗತಿಗೆ
ಸುಗ್ಗಿ ಪರಿಯ ಅನಿಸು
ಅಂತೆಯೇ ಇಂತಿರಲು
ನನಸು ತಾ ಮುನಿಸು.

ಉಸಿರಿರುವ ಜೀವಕ್ಕೆ
ದೇವಲೋಕದಾ ಕನಸು
ಇಹೆಗೆ ಬಾರದದು
ಇಹಲೋಕಕೆ,
ಮಾಲಿನಿಯವಳಿಗೆ
ಹೂ ಮುಡಿಯುವ ಕನಸು
ಅಂತೆಯೇ ಇಂತಿರಲು
ನನಸು ತಾ ಮುನಿಸು.

ಬಾಹು ಬಂಧನದೊಳಿರಲು
ಆ ಪ್ರಿಯ-ಗೆ ಕನಸು
ಬಾಹು ಗಾಳಿಯಂತಿರಲು
ಸೋಕಿ ಹೋಗುವುದು,
ಅಪ್ಪಿ ಮುತ್ತಿಡುವಾಸೆ
ಕನಸಿನಾ ಕನಸು
ಅಂತೆಯೇ ಇಂತಿರಲು
ನನಸು ತಾ ಮುನಿಸು.

Thursday, September 3, 2009

ನೀ ಬರದೆ -

ಕಡಲು ತೇಲಿ ಹೋಗಿದೆ
ಅಲೆಯೊಳು
ಭುವಿಯಡಗಿ ಕುಳಿತಿದೆ
ತನ್ನೊಳು
ಚಿಗುರು ಕಮರುತಲಿದೆ
ಮಳೆಬರದೆ
ನಾ ಬದುಕುಳಿವೆನೆ
ನೀ ಬರದೆ.

ಚೈತ್ರವಡಗಿ ಕುಳಿತಿಹುದು
ಚಿತೆಯೊಳು
ಕಣ್ಣೀರು ಸುರಿಯುತಿಹುದು
ಕುರುಡಿನೊಳು
ಕಾಣ ಕೂಡ ಬರುತಿಹುದು
ಕೇಡಿನೊಳು
ಬರದೆ ನೀನು ಅಡಗಿ ಸೂರ್ಯ
ಸೆರೆಯೊಳು.

ಮೇಲೆ ಮುನಿಸಿಕೊಂಡು ಬಂದ
ಬಿರಿಗಾಳಿ
ಕೊಚ್ಚಿ ತೀರದಾಚೆ ನೌಕೆ
ಮಸಕಳಿ
ಬಿಂಕವದುವೆ ಭಯಂಕರ
-ವಾಗಿದೆ
ಇದು ಯಾವ ರೀತಿ ನ್ಯಾಯ ನಮಗೆ
ಈ ವಧೆ.

ಬಾರೆ ಬಾರೆ ನೀನು ಮಮತೆ
-ಯರಮನೆ
ಸಲಹಿ ಸಾಕು ಅವಿರತ
-ದಸುವನೆ.