Friday, August 21, 2009

ಬದಲು

ಬದಲು ನೀಡಿದೇನೆ ಗೆಳತಿ
ಬದಲು ನೀಡಿದೇನೆ
ನಾ ಕೊಟ್ಟ ಒಲವ ಕನಕಕೆ
ಮುತ್ತ ಬದಲಿಸಿದೇನೆ - ಗೆಳತಿ
ಬದಲು ನೀಡಿದೇನೆ.
ಪ್ರೇಮ ವರ್ಷಕೆ ನೀನು
ಮಳೆ ಬಿಲ್ಲ ಬದಲಿಸಿದೇನೆ
ನೀನು ಬದಲು ನೀಡಿದೇನೆ.
ನನ್ನ ಅಪ್ಪುಗೆಗೆ ನೀ
ರೋಮಾಂಚನದ ಬದಲು
ನೀಡಿದೇನೆ ಗೆಳತಿ
ಮುತ್ತ ಮಳೆಗೆ ನೀ
ಮಾದಕತೆಯ
ಬದಲು ನೀಡಿದೇನೆ.
ನಾವು ಮೀಯ್ದ ಪ್ರೇಮ
ಜಲದಲಿ ನೀನು
ಪ್ರೇಮದಲೆಯ ಬದಲಿಸಿದೇನೆ
ಗೆಳತಿ ಬದಲು ನೀಡಿದೇನೆ.
ನನ್ನ ಹೃದಯವ ಕದ್ದ ನೀನು
ಎಂದು ಬದಲಿಸುವೆಯೆ -
ಬದಲು ನೀಡುವೆಯೇನೆ
ಹೃದಯದ ಬದಲು
ನೀಡುವೆಯೇನೆ.

Thursday, August 20, 2009

ತೀನಿ

ಬಾ ಭಾವವೆ ಕಲೆತು ಪೋಗುವ
ಸ್ನಿಗ್ಧ ಸುಂದರ ಕಡಲಿಗೆ
ನಿನ್ನ ಅಂಶಕೆ ನನ್ನ ಅನಿಸಿಕೆ
ಕಾವ್ಯ ಲೋಕದ ಸ್ಥಾನಿಕೆ.

ಮೋಹ ಬಣ್ಣದ ಪುಟ್ಟ ಹೂವಲಿ
ಮುತ್ತ ಲೇಪನ ದುಂಬಿಯು
ಅವುಗಳಾಶೆಗೆ ನನ್ನ ತೀನಿಗೆ
ಹೂವಿನೊಡಲಿನ ತೋಷವು.

ನಾನು ನೀನು ಅಪ್ಪಿಕೊಂಡು
ಮುತ್ತನಿಟ್ಟಾ ಬರಹವು
ಮಿಲನ ಬಿಸಿಯುಸಿರ ಹಾದಿಲಿ
ಚುಂಬಕವು ಈ ಕಾವ್ಯವು.

Monday, August 17, 2009

ಮಿಲನ

ಆ ಬಾನು ಈ ಭೂಮಿ
ಹೊಂದುವಳಿಕೆ ಎಲ್ಲಿ?
ದಿಗಂತವ ಮುಟ್ಟುತಿಹುದು
ಅಂತ ಅಂತ ಅನಂತ!

ಭೋರ್ ಎಂದು ಕಡಲು ಅಪ್ಪಿ
ಭೂಮಂಡಲ ದಡವನೆ
ತನ್ನೆಡೆಗೆ ಒಯ್ಯುತಿಹುದು - ದಡವ
ಹೃದಯಸೆರೆಮನೆಯೊಳಗನೆ.

ಬಾ ಎಂದು ನೀ ಅಪ್ಪಿ
ಈ ಬಂಧನದೆಳೆಯನೆ
ನಿನ್ನೆಡೆಗೆ ಒಯ್ಯುತಿರುವೆ - ಮನಸ
ಮಿಲನದಭಿಸರಣದೊಳಗನೆ.

ಶ್ರೀಂ-ಕಾರವ ನಾವು ಬಯಸಿ
ಈ ಐಕ್ಯದೊಳಗನೆ
ಅಪ್ಪಿ ಸೇರಿ ಮುಟ್ಟಿ ದಡವ
ಬಾನು ಭೂಮಿಯ ಮಿಲನದಿ.

Sunday, August 9, 2009

ಹಿಂಗಾರ

ಯಾರಿಗಾಗಿಯೂ ಅಲ್ಲ
ಈ ಕವನದ ಸಾಲು
ನನಗಾಗಿಯೇ ಕೇವಲ
ನನಗಾಗಿಯೆ;

ಭಾಷೆಗಾಗಿಯೂ ಅಲ್ಲ
ಭಾಸಕ್ಕಲ್ಲವೇ ಅಲ್ಲ
ಬದುಕುಳಿಯೆ ತೊಳೆದಿರುವೆ
ಭಾವನೆಗಳ;

ಭೃಂಗಾರವಿದಲ್ಲ
ಕಾವ್ಯ ಸಿಂಗಾರವಲ್ಲ
ಮುಂಗಾರು ಕಂಡಂತ
ಹಿಂಗಾರವು.

Sunday, August 2, 2009

ದೈನಂದಿನ

ಒಲವೇ - ನೀ ಬಾಡಿ ಹೋದರೂ
ಸ್ಫುಟವು - ನಿನ್ನ ನೆನಪು.

ಮಬ್ಬುಗತ್ತಲೆಯ ಮರೀಚಿಕೆಯು
ನೆನೆವಂತೆ ಸೂರ್ಯ ದೇವನ
ಕಂಡೆ ಆ ದಿನದಗುಳದನು
ದಿನದಿನವೂ - ಜೀವದೆದೆಯಾ ತಳದಿ.

ದಿನಗಳೇ ಉರುಳಿದರು
ಅಂತೆಯೇ ನೀನಿರಲು
ದೈನಂದಿನ ದಿನವಿದಕೆ
ನಿನ್ನ ನೆನಪ ಸ್ಮರಣ.