Thursday, September 29, 2011

ಹಳೆಯ ಹಾಡು

ಬಾಂದಳ ವೃಂದದ
ಅಸ್ತಮ ಉದಯದಿ
ದಿನಕಳೆದಂತದಿ
ಕರಗುವ ರಾತ್ರಿಯು,
ತಿಂಗಳ ಕಳೆದಿರೆ
ಮುಂಬರೆ ಋತುಗಳು
ಬಗೆ ಬಗೆ ಭಾವನೆ
ಋತು ಕವನ,
ಅಂತೆಯೆ ನನ್ನೆಯ
ಎದೆಯೊಳಗಿರುವ
ಕಾಲಕೆ ಹೊಂದುವ
ಹಳೆ ಹಾಡು.
ಬೇಸಗೆ ಬಿಸಿಲಿನ
ಮೈ ಕೊರೆಯುವ ಛಳಿ
ಚೈತ್ರದಲ್ಲಿನಾ ಕೋಗಿಲೆಯು,
ನನ್ನೊಡನಿರುವ
ಈ ಬಗೆ ಪಂತಕೆ
ನನ್ನೆಯ ಹಳೆಯ
ಜೀವನ ಸ್ಮರಣ
ನನ್ನೆಯ ಹಣೆಬರ
ಹನಿಗವನ.

Monday, September 19, 2011

ಪತನ

ಸವತಿಯ ಅಸುರ ನೆರಳಿನಲಿ
ಆ ಜೇನ ಮೇಲಿನ ಸವಿಯು
ಪಸೆಕಟ್ಟಿ ಪಸುರದನೆ
ಒಳಗನೇ ಅಡಗಿಸಿಹುದು.
ಇದಾವುದೀ ಸೆರೆ, ಸೂರೆಯಾಗಿಸಿಹುದು
ಸುಂಕವನೆ! ಎದೆ ಹೆಡೆಯಾಡಿ
ನಾಗನಾವಶೆಷದ
ಪೊರೆಯ ಕಳಚಿಹುದು.
ಇಂತಿರಲು ಕ್ರಾಂತಿ ತಾ
ಮನದೊಳಗೆಯೆ ಅಡಗಿ
ತಾ ಬೆಳೆಸಿ ಬಿಟ್ಟ ಆ
ಭವ್ಯ ಭವನದೊಳು.
ದಿಗಂತಲಿಹ ಮರದ
ಹೊದರಿನೊಳು, ಕೋಗಿಲೆಯ
ಸವಿ ಕಂಠ.
ಹಾ! ಚೈತ್ರ ಋತು,
ಇಂತಹುದೆ ಬರಲಿಹುದು
ಬರಲಾರವಿಂದು
ಏಕೆಂದು ಹೇಳಲಿ, ಹಳಿಯುತಿಹುದು.
ಈ ಮನುಜ ಕುಲಕೋಟಿ
ಫಲವಿಡುವ ಪಾಠದಲಿ
ಪೇಟೆಯಾ ಬೀದಿಯಲಿ
ರಾಟೆ ಹಾಕಿಹರು,
ಒಳಗಿರುವ ಬಾವಿಯಲಿ
ನೀರು ತಾನಿಲ್ಲ, ಇಂತಿರಲು
ಸವತಿಯಾ ಸವತಿಯೊಳು
ಬದುಕಿರದ ಭವನ
ತನ್ನೊಳಗೇ ತೆರಳಿಹುದು
ಋತುಋತುವಿನ ಪತನದಾ
ಸವಿದನಿಯ ಕೋಗಿಲೆಯಲಿ -
ಇಂತಿಹುದೆ! ಅಂತಹುದೆ!
ನಂಜಿಹುದು ಪುಂಜದಲಿ.

Tuesday, August 9, 2011

ನಂದನವನ

ಕಂದನ ನಂದನವನದೊಳಗೆ
ಆಟಿಕೆಗಳು ಇಲ್ಲೆಲ್ಲ,
ಭುವಿಯಾಗಸ ತಾ ಚಂದಿರನು
ಚೆಂದದ ಕೈಗಳ ಚೆಂಡುಗಳು.
ಕಾರ್ಮುಗಿಲಾಗಸ ಕತ್ತಲೆಯು
ನಿದ್ರಾ ಮಂಪರು ಕನವರಿಕೆ
ಅಂಕಣದಾಗಸ ತಾರೆಗಳು
ಮಂಪರು ಕನಸಿನ ಚುಕ್ಕೆಗಳು,
ಆಗಸದಲ್ಲಿನ ಇವುಗಳನು
ಬಿಡಿಸಿಹಳ್ ತಾಯಿ ಅಂಗಳದಿ
ಬಗೆ ಬಗೆ ಅಂಕದ ರಂಗೋಲಿ.
ಬಾನಿನೊಳಗೆಯೇ ಕದ್ದೋಡಿ
ಭುವಿಯಾ ಮೇಲಿನ ಮೊಲವದುವೆ
ಬೆಣ್ಣೆಯಾಸೆಗೆ ಮೇಲೋಡಿ
ಚಂದಿರನೊಳಗೆಯೆ ಅಡಗಿಹುದು.
ಭುವಿಯಾ ಮೇಲ್ಗಣ ಚಿಟ್ಟೆಗಳು
ಎನ್ನೆಯ ಚೆಂದದ ಬಟ್ಟೆಗಳು
ಇಂತಿಹ ನಂದನವನವನ್ನೇ
ನೀಡಿಹ ದೇವಗೆ ನಮೋನಮೋ.

Thursday, August 4, 2011

ಯಾರು ಬಾರರು

ಯಾರು ಬಾರರೀ ಗುಡಿಗೆ
ಯಾರು ಬಾರರು
ವಿಘ್ನವಾದ ದೇವನ್ಹೊತ್ತ
ಈ ಭವ್ಯ ಗುಡಿಗೆ
ಯಾರು ಬಾರರು.

ನಿರ್ವಿಘ್ನಮಸ್ತುಯೆಂದು
ಆ ಗುಡಿಯಲಿ ಅವರು
ದೇವನ ಪೂಜಿಸಿಹರು
ಕೈ ಕಾಲ್ಗಳ ಕಡಿದುಕೊಂಡು
ಈ ಗುಡಿಯಲಿ ಕುಳಿತ ದೇವನು
ಹೇಗೆ ಅಲ್ಲಿಗೆ ತೆರಳನು.

ಯಾರು ಬಾರರೀ ಗುಡಿಗೆ
ಯಾರು ಬಾರರು,
ಧೂಪ ದೀಪಾರತಿಯ ಬೆಳಗೆ
ಕವಿದ ಕರಿಯ ತೊಳೆಯಲು
ಯಾರು ಬಾರರು.

Wednesday, August 3, 2011

ಅಹುದೇ

ರಂಗನೇ ಬಾರದಿಹ
ಈ ಶೃಂಗ ಸಭೆಯಲಿ
ಕೊಳಲನೂದುವನಾರೆ?
ಮನ್ಮಥನಿರದ
ವಸಂತ ಕಾಲದಿ
ಪ್ರೇಮವು ಮೊಳೆಯುವುದೇ?

ಪ್ರೇಯಸಿ ಬಾರದ
ರಾತ್ರಿಗಳದುವೆ
ಶೀಘ್ರವಾಗಿಹುದೇ?
ಭುವಿ ಮೇಲ್ಮೆಯ ಜಲ
ಮೋಡಗಳಾಗದೆ
ಮಳೆ ತಾ ಬರಬಹುದೇ?

ಮಾವ್ಮರ ಚಿಗುರದೆ
ಕೋಗಿಲೆ ಕಂಠದ
ಸವಿದನಿ ಕೇಳುವುದೇ?
ಸುಂದರ ಸ್ವಪ್ನದ
ಅನಿಸಿಕೆ ಭವಿಸದೆ
ಪ್ರೀಣನ ನನಸಿಹುದೇ?

ಈ ಜನ್ಮದ ಸಿರಿ
ಸಿರಿ ಜಲವಾಗದೆ
ಅಲೆಗಳು ಬರಬಹುದೇ?
ಈ ಪ್ರೇಮದ ಫಲ
ಫಲವತ್ತಾಗದೆ
ಪ್ರೇಯಸಿ ನೀನಹುದೇ?

Thursday, July 21, 2011

ಸಾಕ್ಷಿ ಬೇಕೆ

ವೈಭವವೇತಕೆ ಬೇಕು
ರಾಜನಿಲ್ಲದ ಊರಲಿ
ಭಕುತಿಯ ಹೊನಲ ಹರಿಸಬೇಕೆ
ದೇವರಿಲ್ಲದ ಗುಡಿಯಲಿ,
ಮಾವಿನ ತಳಿರು ಇರಬೇಕೇತಕೆ
ಹರಷವಿಲ್ಲದ ಆಲಯದಿ
ನೀನಿಲ್ಲದಿರೆ - ಬೇಕೇತಕೆ ಪ್ರೀತಿ -
ತುಂಬಿದ ಜೀವ ನದಿ.

ಕರೆವ ದನಿ ಇರಲೆ ಬೇಕು
ಕೊರೆವ ರಾತ್ರಿಯ ಛಳಿಗೆ
ಇರಲಿ ಎಂದೊಡೆ ಹರಿಯಬಹುದೆ
ಬರಿದೆ ಬಯಕೆಯ ಪರಿಗೆ,
ಬಂದುಬಿಡು ಎಂದೊಡನೆ ಇಣುಕಿ
ನೋಡುತ್ತಿದ್ದ ಆ ಹೃದಯ
ಮಾಯವೇನೋ ಎಂದಡಿಗಿದೆ
ತಾನೆ ಬಯಸದ ಬಗೆಯ.

ಮನವೇತಕೆ ಬೇಕು
ಹೃದಯವಿದ್ದರೆ ಸಾಕಲ್ಲವೆ
ನೀ ಬರುವ ಹಾದಿಗೆ ತೋರಣಬೇಕೆ
ಹಸಿರೆಲ್ಲವು ನಿನ್ನ ನಗೆ,
ಹೆಜ್ಜೆಯ ಗದ್ದಲವಿಲ್ಲ
ಬೆಲ್ಲವ ಸವಿಯಬಲ್ಲ ಸನಿಹಕೆ
ಸಾಕ್ಷಿಯೇತಕೆ ಬೇಕು ಹೇಳು
ನಿನ್ನ ವಿನಹ ನಾನಿಲ್ಲವೆಂಬುದಕೆ.

ಬಾ -

ಅಳುವ ಬಿತ್ತಿ ನಗುವ ಬೆಳೆಸಿ
ಉಳಿವ ಹೊನಲ ಹಲವು ಮಾಡಿ
ಎಡವಿ ತಡವಿ ಬೆಳಕ ಬಯಸಿ
ನಿಲುವ ಕಡಲ ಬಯಲು ಮಾಡಿ
ಅಳಿವ ಜೀವಕೆ ಕಳೆವ ಭಾವಕೆ
ನಲಿವ ಮೂಡಿಸು ಬಾ;

ಮಡಿಲ ಹರಡಿ ಹೃದಯ ಕೊಡವಿ
ಪುಟಿವ ಭಾವದ ಅಣಿಯ ಮಾಡಿ
ದೇವನಾಲಯ ಬೆಳಕಿನಾರತಿ
ಹೊಳೆಸಿ ಜೀವದ ಕಿರಣ ಪೋಣಿಸಿ
ಬಳಿವ ನಾವು ಬಣ್ಣ ಬಿತ್ತಿಯ
ಬೆರಗುಗೊಳಿಸುವ ಬಾ;

ಕುಣಿವ ಹೆಜ್ಜೆಯ ನಲಿವ ಗೆಜ್ಜೆಗೆ
ನೃತ್ಯ ಭಂಗಿಯ ಉಳಿವ ಕಡೆದು
ಬೆಣ್ಣೆಯಂಮೃತ ರುಚಿಯ ಸೋಕಿಸಿ
ಅತಿಥಿ ಬರುವ ಹಾದಿ ಕರುಣಿಸಿ
ರಂಗವಲ್ಲಿಯ ಹರುಷ ಚಿತ್ರವ
ಬರೆದು ಉದಿಸುವ ಬಾ;

ಬಾ-ಬೆಳೆಯುವ
ಬಾ-ಮೆರೆಯುವ
ಬಾ-ಮರೆಯುವ ನಮ್ಮನೆ,
ಬಾ-ಬದುಕುವ
ಬಾ-ಅಲೆಯುವ
ಬಾ-ಮುರಿಯುವ ಸೆರೆಮನೆ.

Wednesday, July 20, 2011

ಹೃದಯದ ಅಳಲು

ಮನಸ ಮರೆತು ಬದುಕುವುದ ಕಲಿ ಹೇ! ಜೀವ
ಛಿದ್ರವಾದರೇನೀಗ ಹೃದಯ - ಚಿಂತೆ ಇರುವುದಿಲ್ಲ ನಿನಗೆ;
ಬದುಕಿದ್ದೂ ಸತ್ತಂತೆ ಮಾಡುವುದೇ - ಮನಸು
ಅದರ ಹೊಂಚನ್ನು ತಿಳಿಯುವುದರಲ್ಲೆ ಅರ್ಧವಾಗುವುದೀ ಆಯಸ್ಸು.

ಏಕಾದೆವು ನಾವು, ಛೀ ಮತ್ತೆ ಮನಸ್ಸಿನದೇ ಚಾಲನೆ
ಪ್ರಕೃತಿ ಸೊಕ್ಕಿನಲ್ಲಿ - ಅಳತೆಗೆ ಅರಿವಿರುವುದೆ?
ಹೃದಯ ಗೆಲ್ಲುವುದಕೆ ಮನೋಬಲದ ಅಗತ್ಯವೇಕೆ ಎಂದರೆ
ನಾನು ಗೆದ್ದೆನೆಂದು ಕುಹಕದಲಿ ನುಗುತ್ತದೆ - ಮನಸು.

ಮನಸ್ಸಿನದೆ ಮೇಲು ಹೃದಯ ಕ್ಷುಲ್ಲಕವಾದೊಡೆ
ಬಾಳು ಏತಕೆ ಎಂಬುದ ಕೇಳಿದರೆ ನಕ್ಕಾರು ಎಲ್ಲರು,
ಬದುಕುಳಿ - ಹೃದಯದ ಅಗತ್ಯವಿಲ್ಲ ಎಂದೆಲ್ಲ ಸಾರುವವರಿಗೆ
ಮನಸ್ಸ ಮಿಠಾಯಿಯ ರುಚಿಯಲ್ಲಿ ಹೃದಯದ ಸಿಹಿ - ಬೇಕೆ?

Sunday, July 17, 2011

ಸಿರಿ

ಭೂಮಿಗಿಲ್ಲದ ಸೊಬಗು
ಭಗವಂತನಿಗೆಲ್ಲಿಹುದು
ಪಾತಾಳ ಭುವಿಯಾಗಸ
ಭಗವಂತನೊಳಗಿಹುದು
ಹೊರಗಿರುವ ತರವೆಲ್ಲ
ಕುಂಕುಮದಿ ಹೋಮ
ಕರಿಬಣ್ಣ ಮೆತ್ತಿರುವ
ಧೂಪ ದೀಪಾರತಿ.
ಗರ್ಭ-ಗುಡಿಯೊಳಗಿರುವ
ಭುವಿಯಂತಿಮದಲಿ
ಗೋಪುರದಾ ಸೊಬಗೆಲ್ಲ
ಆಗಸದಲಿಹುದು.
ಅಡಿ ಪಾಯ ಬಧ್ರತೆಯು
ಪಾತಾಳದಲಡಗಿಹುದು
ಭಗವಂತನಾ ಗುಡಿಗೆ
ಬಾಗಿಲಿಹುದೇ?
ನೈಸರ್ಗಿಕ ಸೊಬಗೆಲ್ಲ
ಗುಡಿ ಪ್ರಾಂಗಣದ ಬಣ್ಣ
ಹೊಳಪಿನಾ ಕಳಶವದು
ಅನಿಸಿಕೆಯ ಸ್ವರ್ಗ.
ಸ್ವರ್ಗದ್ಹೊಳಪಿನಾ ಪುರಿಗೆ
ಮೆಟ್ಟಿಲಿರದಾ ಹಾದಿ
ಏರಿಳಿತವಿರದಾ
ನೆಟ್ಟ ನೆತ್ತಿಯಾ ಹಾದಿ
ಇಂತಿರಲು ಈ ಸೊಬಗ
ಅಂದಿನದು ಅನಿಸಿಕೆಯು
ಪಾತಾಳ ಕಳೆದವುಗಳ
ಇರುವಿಕೆಯ ಗುಡಿಯು.
ಪಕ್ವ ಕರ್ಮಗಳೆಲ್ಲ
ಪ್ರಾಂಗಣದ ಬಣ್ಣ
ಕಣ್ಣು ಕುಕ್ಕುವ ಸೊಬಗೆಲ್ಲ
ಭಗವಂತನಿಗಿಲ್ಲ;-
ಇಹುದದುವೆ ನಮಗೆಲ್ಲ
ಸ್ವರ್ಗವೆಟುಕಿದಾ ಸಿರಿ
ನಮಗಿರುವ ಪರಿಯೆಲ್ಲ
ನಮ್ಮದದೇ ಇಲ್ಲೆಲ್ಲ.

ಮಾಡು

ಕೆರೆಯ ಬದಿಯ ಏರಿ ಮ್ಯಾಗೆ
ಇಂದು ಕಿರಣದ ತಂಪು ಹಾಸಲಿ
ಕುಳಿತು, ಅಡಿಯ ಚೆಲುವ ಜಾಡನು
ನೋಡುತಿರಲು ನಾನು -
ಕೆರೆಯ ನೀರಿನ ನೀಲಿ ತಾವರೆ
ಬಿರಿದು, ದುಂಭಿಯ ಮಡಿಲಿಗ್ಹಾಕಿ
ಹಾಲನೈಯ್ಯುವ ಮಾಯಿಯಂತೆ
ಮಧುರ ಸ್ಪರ್ಶವ ನೀಡುತಿಹುದು.
ಬಾನಿನ್ಹರವಿನ ಮೋಡವದುವೆ
ವಿವಿಧ ವಿಧ ವಿಧ ಬಂಧ ರಚಿಸಿ
ಮೂಡು ಕಲ್ಪನೆ ಮಾಡುಗಳಿಗೆ
ಮೆಟ್ಟಿಲ್ಹಾದಿಯ ಸೃಷ್ಟಿಸಿಹುದು.
ಬದಿಯ ಹಸುರಿನ ಹುಲ್ಲ ಹಾಸಲಿ
ಎನ್ನ ಪ್ರೇಯಸಿ ಕುಳಿತು ದೃಷ್ಟಿಸಿ
ಚಂದ್ರನೊಳಗಿನ ಮೊಲದ ಬಿಂಬವ
ಕಣ್ಣಿನೊಳಗೆಯೇ ಮೂಡಿಸಿ
ಎನ್ನ ಕಲ್ಪನೆ ಮಾಡುಗಳಿಗೆ
ಮಾದಕತೆಯಾ ಮೆಟ್ಟಿಲನ್ನು
ಮೂಡಿಸಿಹಳು.
ಚಂದ್ರ ಕಿರಣದ ರಾಮ ಬಾಣವು
ಮನದ ಅಂಚಲಿ ಕಾಮ ಮೂಡಿಸಿ
ಬದಿಯ ಪ್ರೇಯಸಿ ಕಾಮ ಕನಸವು
ಎನ್ನ ಕಲ್ಪನೆ ಮಾಡುಗಳಿಗೆ
ಶಯ್ಯೆ ಚೆಲುವನೆ ಧರಿಸುತಿಹುದು.
ದುಂಭಿ ನಾನ್, ಅವಳ್ ನೀಲಿ ತಾವರೆ
ಅಡಿಯ ನೀರ ಅಲೆಗಳದುವೆ
ಮೃದು ಸ್ಪರ್ಶದಾ ಮಧುವ ಹಾಸಿಗೆ
ಬದಿಯ ತಾವರೆ ಗಂಧ ಪಸರಿಕೆ
ಮೇಲೆ ಕಾಣುವ ಚಂದ್ರನವನು
ಎನ್ನ ಅನಿಸಿಕೆ ಮಾಡುಗಳಿಗೆ
ಮಧುಚಂದ್ರದಾ ಮನಸ ಕನಸ
ನನಸು ಮೂಡಿಸುತಿರುವುದು.

ಬೇಡವೀ ಕಾಟ

ಸುಂದರಾಂಗದ ಸುಮತಿಯರೆಲ್ಲ
ಸುಂದರದಾ ಸೆರಗ ಹೊದ್ದು
ಸುಂದರಾಂಗವ ಮರೆಮಾಚಿರುವಲ್ಲಿ
ವಲ್ಲಿ ಹೊದ್ದ ಯುವಕ ವೃಂದ
ಮುಂಗಾರ ಕಾಣ್ವಂತೆ ಆ-
ಮಾಂಗಲ್ಯವ ಹಿಡಿದು ಕೈಯೊಳು
ಕೊರಳಿಗಾಗಿ ಕಾದಿಹರು.

ರಾಗವದೋ ಮೋಹನ
ಚಂದ್ರ ತಾನವನು ಮಧುಲೇಪಿತ
ಶಯ್ಯೆಯದುವೆ ಮಲ್ಲಿಗಾವೃತ
ಮಕರಂದವದು ತುಟಿ ಭರಿತ
ಆದರೂ ಅಧರ ಕಾಣುವುದು
ಬರೇ ಸೆರಗ, ಆ-
ಮರೆಮಾಚುವ ಸುಂದರ ಸೆರಗ.

ಏನ ಕಾಡುವುದೀ ಸೆರಗು
ಒಳಗಿನದದು ಅಳುವೋ-ನಗುವೋ?
ಮೋಡ ಮರೆಯೊಳಗಿನ ಆ
ವೇದಪ್ರದನು ಅರುಹುತಿಹನು -
ದೇವನೆನ್ನಾಕ್ರಂದನ
ಸರಾಗವಾಗಿರಲೆಂಬುದೇ -
ಏಕೀ ಸವತಿಯ ಕಾಟ.

ಚೈತನ್ಯ ಪಥದೊಳು ನಾನಿಹೆ
ನಿನಗಿದಾವ ಜಾಡ್ಯ
ಸ್ವಾವಲಂಬನವೆನಗಿರಲಿ
ಕನವುಗಳೇ ಆಗಿರಲವು
ಸುತ್ತಾಟ ತಿಕ್ಕಾಟವು ಬೇಡ
ಬೇಡ ನನಗೀ ಸವತಿಯ ಕಾಟ
ಈ ಸೆರಗ ಸವತಿಯ ಕಾಟ.

ಪ್ರತಿರೂಪ

ಯಾವುದೀ ಪ್ರತಿಬಿಂಬ
ಎನ್ನ ಬಿಂಬದಾ ಪ್ರತಿರೂಪ
ಎಡ-ವುಗಳ ಬಲಮಾಡಿಸಿ
ವಿರುದ್ಧವಾ ಮೂಡಿಸಿಹುದು
ಬಲ-ವಿರುವ ಕೈಗಳಿಗೆ
ಎಡ-ವನ್ನು ಸೂಸಿ
ಕಣ್ಣಿನಲೇ ಬಲ ಎಡ-ವಿನಾ
ತೊಡರುಗಳ ನಿರ್ಮಿಸಿ
ಮುಖವದುವೆ ಎನ್ನ
ಕಣ್ಗಳಿಗೆ ಕಾಣ್ವಂತೆ
ಕನ್ನಡಿಯೊಳಗಿನದು ಅದು
ಯಾವುದೀ ಪ್ರತಿಬಿಂಬ.
ಮನಸ ಬದಲಿಸಲಾಗದೇ
ಮಾತ ಬದಲಿಸುತಿಹುದು
ಎದೆಯಾಳದ ಏರಿಳಿತಕೆ
ಅಲೆಗಳೆಂದು ಅರ್ಥೈಸಿ
ಸೂಸುವಾ ಸುಗಂಧದ
ಪ್ರತಿರೂಪವ ಸೂಸಿ
ಸೌಗಂಧದ ಬಂಧದಲಿ
ಸೆರೆಯಾಗಿಸಿಹುದು
ನಡುವೆ ಬರೇ ಆ ಕನ್ನಡಿ
ಬಿಂಬವಾ ಪ್ರತಿಬಿಂಬಿಸಿಹುದು
ಈ ಲೋಕಕೆ ಎನ್ನ ಬಿಂಬ
ಕಾಣುವುದು - ತಾನದು
ನಶಿಸಿಹೋಗಲು.
ಎಂದಾಗುವುದೀ ಸುದಿನ
ಎನ್ನ ಬಿಂಬವೆನ್ನ
ಅಲಂಕರಿಸಲು-
ತಪ್ಪು ಸರಿಗಳು ಅದರಂತೆಯೇ
ಇರಲು ಕಾಣಕೂಡುವುದು.
ನನ್ನ ರೂಪವದು
ನನ್ನಂತೆಯೇ ಇರಲಿ
ಬಲ ಎಡವುಗಳವು
ತಿರುಗಿ ಬರದಿರಲಿ, ಬೇಡ!
ಬೇಡ! ನನಗೆ ಆ
ಪ್ರತಿಬಿಂಬದಾ ಪ್ರತಿಯು.

ಅನಿಸೇ!

ಮನಸು ಕನಸುಗಳ
ಮುಸುಕು ಮರೆಯಲಿ
ಮನಸು ಕನಸೇ?
ಕನಸು ಮನಸೇ?
ಆಲಿಂಗನದಿ ಬರುವ
ಮುತ್ತುಗಳಾ ಮರೆಯಲಿ
ಪ್ರೇಮವು ಹನಿಯೇ?
ಹನಿಹನಿಯು ಪ್ರೇಮವೇ?
ನಿದ್ರೆಯಾ ಮಂಪಿನಲಿ
ಈ ಬಾಳ ಕನವುಗಳವು
ಬಾಳಿನಾ ನನಸೇ?
ನನಸಾದ ಬಾಳೇ?
ನನ್ನೊಳಗೆ ಜನಿಸಿರುವ
ನನ್ನೊಳಗೆ ನಲಿದಿರುವ
ನನ್ನೊಳಗೆ ಬದುಕಿರುವ
ಈ ಬಾಳು ಅನಿಸೇ?
ಅನಿಸಿಕೆಯ ಮುನಿಸೇ?

ಆನಂದ

ನನ್ನೊಳಗಿನ ಕನಸು
ನಿನ್ ಸನಿಹ ನನಸು
ಆ ಕನಸಿನೊಳಗಿಹುದು
ಲೋಕದಾ ಅನಿಸು,
ನಮ್ಮೊಳಗಿನಾನಂದ
ಇರುವುದೊಳಗಿನ ಬಂಧ
ಕನಸು ನನಸಿನೊಳಗಿರುವ
ಪರಮಾನಂದ.

ಪ್ರೇಕ್ಷಕರಿಗೆ ಪ್ರೀಣನ
ನಾವು ಅಲಂಕರಿಸಿರೆ
ಅಭಿಸರಣದೊಳದುವೆ
ನಾವು ನಿಂತಿರಲು,
ಸುಂದರದಾ ಪುಷ್ಪವು
ಬಿರಿ ಬಿರಿದು ಎದೆಯ
ಪರಿಮಳವ ಚೆಲ್ಲಿ
ಆಹ್ಲಾದ ನೀಡುವುದು.

ಚೈತ್ರ ಋತುವಿದಲ್ಲ
ತಪೋಸಿದ್ಧಿಯಲ್ಲ
ಪ್ರೇಮ ಕಾಶ್ಮೀರದೊಳಿರಲು
ನಾನು ನೀನು,-
ನಮ್ ಪ್ರೇಮ ಬಂಧುರ
ಸಿಂಧೂರವನಿಟ್ಟಿಹುದು
ಆ ಆಗಸದೊಳಗನೆ
ನೀಲಿ ತೇಲ್ ಬಣ್ಣವ.

Saturday, July 16, 2011

ಅರ್ಹತೆ

ಮಧುವ ಸವಿದೊಡನೆ ಸಿಹಿಯ ಅರಿವಾಗುವುದೆ?
ಪ್ರೀತಿಯ ಅನುಭವಿಸಿದೊಡನೆ ಜೀವ ಸುಖಿಸುವುದೆ?
ಭೂಮಿಯ ಮೇಲೆ ನಿಂತೊಡೆ ಆಗಸದ ಎತ್ತರ ಅರಿವಾಗಿ
ಬಾಗಿ ನಡೆಯುವ ಸಂಯಮ ಉದಿಸುವುದೆ - ಹೇಳು?

ಹೌದು, ಸಂಬಂಧದ ಅಸಂಬದ್ಧತೆ ಇದೆ ಇಲ್ಲಿ,
ಮುಸುಕ ಎಳೆದು ಮರೆಮಾಚುವ ಮರೀಚಿಕೆಯ ಅನುಭವದಲ್ಲಿ;
ನಿಜ ಹೇಳಬೇಕೆಂದೇನಿಲ್ಲ, ಸುಳ್ಳ ಹೇಳುವ ಅಗತ್ಯವಿಲ್ಲ
ಜಗವ ನಿಗೂಢದಲ್ಲಿ ಕಲ್ಪಿಸಿ ಹೂವ ಅರಳಿಸಬಹುದಲ್ಲ!

ಧರ್ಮದ ಬೇಲಿಯಾಚೆ ನಿಂತ ಮಾನವೀಯತೆಯ ಮೆರಗು
ಒಳಬಂದು ಸಂತೈಸುತಿರೆ ಜೀವವ, ಅದಕ್ಕೆ ಲೆಕ್ಕವಿದೆಯೆ?
ಏನ ಹೇಳಿದರು ಅದಕ್ಕೊಂದು ಅರ್ಥ ಹುಡುಕುವ ಮತಿಗೆ
ಪ್ರಶ್ನೆಯ ಬಿಟ್ಟು ಉತ್ತರ ಹುಡುಕುವ ಅರ್ಹತೆಯಿದೆಯೆ - ಹೇಳು?

ವಿರಹವೇ ಮೊದಲಾದರೆ ಪ್ರೀತಿಗೆ ಪದ ಕಲ್ಪಿಸುವರು ಯಾರು?
ಮತಿಯ ವಿವೇಕದ ಮೋಹದಲ್ಲಿ ಹೃದಯವ ಬಂಧಿಸಿಬಿಟ್ಟರೆ -
ಉಳಿವಿಗೆ ಬರಹೇಳುವ ಬಲವೆಲ್ಲಿದೆ ಎಂಬುದ ಹುಡುಕಿದರೆ
ಮೌನದಲ್ಲಿ ಸುಖಿಸುವ ಅರ್ಹತೆ ಕೈತಪ್ಪಿ ಹೋಗುವುದ ಕಲ್ಪಿಸಲಾರೆ!