Friday, July 6, 2012

ಮಾಟ


ಕಂದರದ ಹೊದರಿನೊಳಗೆ
ನಾ ಬದುಕುಳಿಯಲು
ಆ ಜೀವ ಚೇತನದ ಕಿಡಿ
ಬರುವುದೆಂದೋ?
ಅಂದಿನವರೆಗು
ನಾ ಈ ಸಮಾಧಿಯೊಳು
ಪರಿವೇಷ ಕಾಣದಿಹ
ಕುರುಡನಂತಿರುವೆ;
ಬರುವನಾದರೊ ಚಂದ್ರ
ಗ್ರಹಣ ಕೆಣಕುತಿರುವನು -
ಅನಿಸಿಕೆಯನೇ ಮುತ್ತಿರಲು
ಅಣಕು ಪರಿಯು.
ಚಿತೆಯೇ ಭಸ್ಮವಾಗದಿರಲು
ಚಿಂತೆಯೇತಕೆ
ನಿಸ್ವನವಾಗಿಹುದು,
ಮಾಟಗಾರ(ತಿ)ನ(ಯ)ವನೋ(ಳೋ)
ಬರುವುದಾದರೆ
ನಾ ಕುಣಿಯುವೆ ಅವನ(ಳ)
ಮಡಿಲಲಿ.

Wednesday, July 4, 2012

ಅರ್ಥವಿಲ್ಲದ ಪದ


ಏತಕೀ ಭಾಷೆಯ ಬಂಧನ
ಏಕೆ ಉದಿಸಿದೆ ಈ ಮನಸ್ಸಿನಾಕ್ರಂದನ
ಬವಣೆಯ ಹೊದ್ದು ಬದುಕುಳಿಯಲು
ಹಲುಬಬೇಕೆ, ಉಸಿರ ಹಿಡಿಯಬೇಕೆ?

ನಿಲುವ ಅಲುಗಿಸುವ ಸ್ಪಂದನವಿರೆ
ಬಾಳನೆ ರೂಪಿಸುವೆನೆಂಬ ಭರವಸೆಯು
ಕಲ್ಪನೆಯ ಸಿರಿಗೊಂಬೆಗೆ ರೂಪ ತುಂಬಿರೆ
ನಾಮ ಬೇಕೆ, ಬಿಂಬಕ್ಕೆ ಪ್ರತಿರೂಪ ಬೇಕೆ?

ಬಂದು ಹೋಗಿ ಸಂತೈಸುವ ಪ್ರೀತಿ
ಶಂಕೆ ರೂಪದಲಿ ಕೊರಗಿ ಬಳಲುತಿರೆ
ತನ್ನೆಲ್ಲವನ್ನು ಅಡವಿಟ್ಟ ಜೀವದ ತ್ಯಾಗಕೆ
ಪ್ರಶಸ್ತಿ ಬೇಕೆ, ಬಲವಿಲ್ಲದ ಪ್ರಶಂಸೆ ಬೇಕೆ?

ಹೆಜ್ಜೆ ಹೆಜ್ಜೆಗೂ ಹೂ ಮನಸ ಹೊದಿಸಿ
ಭರವಸೆಯ ಬುನಾದಿಯ ಅರಿವ ಸೂಸಿ
ಇಂದಿಲ್ಲದಿರೆ ನಾಳೆಯಿದೆಯೆಂದು ಪ್ರಾಣ ತುಂಬಿದವಗೆ
ಗದ್ದಲದ ಮಾತೇಕೆ, ಅರ್ಥವಿಲ್ಲದ ಪದವೇಕೆ?

Friday, June 29, 2012

ಬದುಕು


ಹೃದಯದ ಹೊದರಿನ
ಕಂದರದೊಳಗೆ
ಇಳಿದೇರುತಿರುವಾ -
ನಿನ್ನಯ ಒಲವಿನ
ಪರಿಯನ್ನೇ -
ಹೇಗೆ ತಿಳಿಯಲಿ ನಾ,
ಹೊರಡಿಸು ಅದನೆ
ಹೃದಯದ ಹೊರಗೆ
ರಕುತದಿ ಬೆರೆಸಿ
ನಿನ್ನ ಮುಖಕೆ.
ಬಿಡಿಸುವ ಭಾವನೆ
ನೇತ್ರದ ಚಿತ್ರದಿ
ಕಾಡಿಗೆ ಕಪ್ಪಿನ
ಬಿಳಿ ತೋರಣ,
ಅಲ್ಲಿಯೆ ನೆಲೆಸುವೆ
ಯುಗಗಳೆ ನಾನು
ಹರುಷದ ಹಬ್ಬವ
ಆಚರಿಸಿ,
ಪ್ರತಿ ಹರುಷದ
ಬಡಿತದ ರೂಪಕೆ ನಾ
ಪ್ರತಿಯಾ ನೀಡುವೆ
ಚುಂಬನದಿ,
ಅಭಿಸರಣದಿ ನಾ
ನಿನ್ನೊಡನಿರುವೆ
ನಿನ್ನಯ ಹೃದಯದಿ
ರಕುತವಾಗಿ;
ನಿನ್ನಯ ಬಗೆಯಾ
ಭಾವನೆಗಳಿಗೆ
ಎನ್ನೆಯ ಪರಿಯಾ
ಜೀವವಾಗಿ, -
ನಾ ಬದುಕುಳಿವೆ
ನಿನ್ನೊಳಗೆ
ನಿನ್ನ ಹೃದಯದೊಳಗೆ.

ನಿನಗೆ


ಚೆಂದದ ತಾರೆಯ
ಹೊಳೆಯುವ ಲೋಕದಿ
ನಿನ್ನೆಯ ಕಣ್ಗಳ
ಚಿತ್ರಣವು,
ಪ್ರೇಯಸಿ! ನೀ ಅದರಲಿ
ಉಲಿದಿಹ
ಭಾವದ ಬೆಳಕಿನ
ಬುನಾದಿಯು.
ಯಾವ ಹೃದಯದ
ಹರಿಯುವ ಭಾವನೆ
ಈ ಮಾಟದ ನೋಟದಿ
ಅಡಗಿಹುದೋ,
ನನ್ನದೀ ಪರಿ
ಸುಂಕದ ನಾಮಕೆ
ನಿನ್ನದೆ ಸ್ಪಂದನ
ರಿಂಗಣವು!
ಬಾ! ಪ್ರೇಯಸಿ! ನೀ
ಬಂಧಿ ಇಲ್ಲಿ
ನನ್ನೆಯ ಹೃದಯದ
ಸೆರೆಯೊಳಗೆ,
ಉಕ್ಕೇರುವ ಎನ್
ಭಾವದ ಹೊಳೆಯೊಳು
ನೀ ತೇಲಿಹೆ ಜೀವನ
ದೋಣಿಯಾಗಿ,
ಅಂತಿರೆ ನಾ ಅದರೊಳು
ಕುಳಿತು
ಜೀವನ ಪರಿಯಾ
ಹುಟ್ಟನು ಹಿಡಿದು
ಪ್ರೀತಿಯ ದಡಕೆ
ಒಯ್ಯುತಿರುವೆ,
ನಿನ್ನ ಪ್ರೀಣನ ನೇತ್ರವ
ಚುಂಬಿಸುವೆ,
ನಿನ್ನನೆ ಎದೆಯೊಳು
ಬಂಧಿಸುವೆ.

Wednesday, June 27, 2012

ಭಾವರಹಿತ ಕಾವ್ಯ


ಕವನ ಬರೆಯಲಾರೆ ನಾ
ಈ ಪಲುಕ ಮೋಡಿಯಲಿ
ಕವನ ಬರೆಯಲಾರೆ.

ಯಾವ ಜನ್ಮದ ಸಿರಿಯು ಇದೋ
ಬರೇ ಮಂಪರು ಭಾವ
ಈ ಲೋಕದ ಸ್ಥಾನಿಕೆಗಳು
ತೂಗುತಿರುವುದೆನ್ನನು,
ಜೋಲಿ ಹೊಡೆದು
ಹಂದರವ ಸೇರಿ ನಾ
ಕೊಂದೆನು ಕವನವ.

ಎದೆಯ ಅಲೆಯ ಭಾವವೆಲ್ಲ
ಪಲುಕುಗಳಲಿ ಕಲಕಿಹೋಗಿ
ಬರೇ ಮಿಶ್ರ ಲೇಪದಿ,
ಹುಳುಕು ಭಾವ ಹಳತು ಬಂದು
ಕೊಳೆತ ಕಾವ್ಯವ
ಮೂಡಿಸಿಹುದು
ಕೊಳೆತು ನಾರುತಲಿರುವುದು.

ಎನ್ನ ಭಾವದ ಮಂಪಿನಲಿ
ಬರೇ ನಿಶೆಯ ಕಾವ್ಯ ಲಹರಿ
ಹರಿದು ಹರಿದು ಮುಂದೆಹೋಗಿ
ಮಂದ ದಾರಿಯಲಿ ಸಾಗುತಿಹುದು,
ಹಾದಿ ಹುಳುಕ ಕಾಣಲಾರದೆ
ನನ್ನ ನಾನೇ ಒಯ್ಯುತಿರುವೆ
ಭಾವರಹಿತ ಕಾವ್ಯಕೆ.

Sunday, June 3, 2012

ಸ್ಮರಣೆ


ಬೆರಳ ಬೆಸೆದು, ಒಲವ ಹೊಸೆದು
ಸೂರ್ಯ ಕಿರಣದ ಹಚ್ಚೆ ಬರೆದು
ಹಚ್ಚೆ ಹೂವಿನ ಕಂಪಿನೊಸಗೆ
ಎರೆದು ಬದುಕಿನ ಬರಹ ಪರಿಗೆ
ನಾನು ನಿನ್ನನೆ ಸ್ಮರಿಸುವಾಸೆಯ
ನವಿರ ಪುಳಕಕೆ ಏನ ಹೇಳಲಿ?

ನಲಿವ ಬಣ್ಣವ ಉಲಿವ ಕಣ್ಣಿನ
ಹನಿಯ ಸ್ಪರ್ಶದನುಭವದ ಮಾಯೆಯ
ಬಳುಕ ಬಳ್ಳಿಯ ನಲಿವಿನಪ್ಪುಗೆ
ಹಗುರವಾಗಿಸೆ ಜೀವದಳಲನೆ
ನಾನು ನಿನ್ನನೆ ಸ್ಮರಿಸುವಾಸೆಯ
ಮೆರೆವ ಸ್ಮರಣೆಗೆ ಏನ ಹೇಳಲಿ?

ಅಳಲ ಕಸಿದು, ಬೆಳಕ ಬಸಿದು
ಕಿರಣ ಹೂನಗೆ ಹೊನಲ ಬಳಿದು
ಬದುಕ ಮಾಯೆಯ ಅಣಿಯ ಅಂದಕೆ
ಮಧುರ ಪರಿಯ ಸಂಗೀತ ಮಿಶ್ರಿಸೆ
ನಾನು ನಿನ್ನನೆ ಸ್ಮರಿಸುವಾಸೆಯ
ಹರಿವ ಸಾರಕೆ ಏನ ಹೇಳಲಿ?

Friday, May 11, 2012

ಮೌನ ಮಸಣ


ಮುಂದೆ ನೋಡಿರೆ ಬರಡು
ಹಿಂದೆ ನೋಡಿರೆ ಬರಡು
ಎತ್ತಲೂ ಮಸಣ ಮೌನ;
ತೊಟ ತೊಟನೆ ಸೋರಿರುವ
ಮಳೆಯ ಹನಿಹನಿಗೆ
ಭುವಿಯ ತೇಕುವ ಎದೆಯ
ಅನಾವರಣ.

ಎಲೆಯಿರುವ ಮರಗಳಿಗೆ
ಹಕ್ಕಿಗಳ ಹಾತೊರಿಕೆ
ಹಸಿರ ಹುಲ್ಲಿನ ಬಣ್ಣ
ಹಚ್ಚ ಹಳದಿ;
ತೊಗಲ ಬಿಟ್ಟಿರುವ ಮರ ಮೂಲಿಕೆಗಳೆಲ್ಲ
ಹೊರಟು ವಾಯು ಸೇವನೆಗೆ
ಭಕ್ತಿ - ಭಯದಿ.

ನೆತ್ತಿ ಮೋಡಗಳನೆಲ್ಲ
ಒತ್ತಿ ತೂರುವ ಗಾಳಿ
ಪರಿವೇಷ ಮುಟ್ಟಿರಲು
ಹಿಮದ ಬಣ್ಣ;
ನಮ್ಮನೇ ನಂಬಿರುವ
ಅಡಿಯ ಬಿಡದಿಗಳೆಲ್ಲ - ಈ ಶವಸಂಸ್ಕಾರದೊಳು
ಮೌನ ಮಸಣ.