Tuesday, July 2, 2013

ಸೊಪ್ಪು ಮಾರುವ ಹುಡುಗಿ

ಸೊಪ್ಪು ಮಾರುವ ಹುಡುಗಿ
ತುಂಬಿದ ಬುಟ್ಟಿಯ ಹೊತ್ತು
ಒಪ್ಪು ವರ್ಣನೆಯಲಿ -
ಕೂಗ ಹಾಕಿದಳು.

ಪಾಲಾಕು, ಕಿಲ್ಕೀರೆ, ದಂಟೆಂದು
ತಿರುಗಿ ತಿರುಗಿ ಹೇಳುತ,
ಹೊಚ್ಚ ಹೊಸದು ಈ ಪಚ್ಚ -
ಹಸಿರೆಂದು - ಸಾರಿ ಹೇಳುತಿಹಳು.

ನಾಲ್ಕಾಣೆಗೆಂಟೆಂದು
ಈ ಸಿಹಿ ದಂಟೆಂದು,
ಕೊಳ್ಳಿ ಕೊಂಡುಂಡಿರೆಂದು -
ಬಗೆಯಾಗಿ ಹೇಳುತಿಹಳು.

ಕೊಳ್ಳಿರಮ್ಮ - ಕೊಳ್ಳದಿರಬೇಡಿ
ಕೂಳಿಗೆ ಕಾದಿಹ - ಕೂಸುತಮ್ಮ,
ಇಂದು ಕೊಂಡುತಿಂದರೆ
ನಾಳೆಗೆ ನೀವೆ ಕರೆವಿರೆಂದಿಹಳು.

ರೊಕ್ಕವ ಕಮ್ಮಿ ಕೊಡಬೇಡಿ
ಹರಿಸಿರುವೆ ಛಳಿಯ ಬೆವರು,
ಒಳಿತಾದ ಮನಸಿನಿಂದ ಕೊಡಿರಿ
ಇರಲಿ ಮನೆಯಲಿ ಹಾಲ್ಮೊಸರು.

ಕೊಂಡನಂತರ ಹಾಕಿಹಳು
ಬಾಯಗಲದ ನಗು -
ಬರುವೆನೆಂದು ಮುಂದೆ ಹೊರಟಿಹಳು
ಹಸಿರು - ಸೊಪ್ಪು ಮಾರುವ ಹುಡುಗಿ.