Saturday, October 17, 2020

ಅಮ್ಮನಿಗೆ-

ತರಗೆಲೆಗೆ ನೀರುಣಿಸಿ

    ಹಸಿರ ಸಿಂಪಡಿಸಿದಂತೆ

ನೋವಿನ ತೆಳುಪರದೆಯ ಸರಿಸಿ

    ನಲಿವ ಮೂಡಿಸಿದಂತೆ,

ದನಿ ಅಬ್ಬರದ ನಡುವೆ

    ಶಾಂತತೆಯ ಹರಡಿದಂತೆ

ಇರುವವರೆಗೆ ಬಳಿಯಿರಲಿ

    ಕಾಣದಿಹ ಒಲುಮೆಯ ಮಾಯೆ,

ನಾ ಬಳಿಯಿರಲಿ ಇಲ್ಲದಿರಲಿ

    ನೀನಿರುವೆ ನನ್ನ ಬಳಿ ಸದಾ

ನನಗೆ ಬೇಕಿರಲಿ ಬೇಡದಿರಲಿ

    ನೀ ಹೊದಿಸುವೆ ಸುಖದ ಹದ,

ಯಾರಿರಲಿ ಇಲ್ಲದಿರಲಿ

    ನಿನ್ನ ಪ್ರೀತಿಯೆ ನನ್ನ ನೆರಳಾಗಿ

ನನ್ನ ರೂಪದ ಬಳಿಯಿರುವ

    ಎನ್ನ ಜೀವದ ತಿರುಳಾಗಿ,

ನನ್ನ ಸತ್ವದ ತತ್ವಕೆ

    ಕಾಣದಿಹ ಬಲವಾಗಿ

ಬಂದಿದುದಕೆ ಹೆಸರೇಕೆ? - 

    ನನ್ನೊಳಗಿರುವ ಆತ್ಮಕೆ,

ಅಮ್ಮ - ಸಾಕೆನಗೆ ಈ ಜೀವಂತಿಕೆ

    ನಿನ್ನ ರೂಪದ ಪ್ರತಿಬಿಂಬಕೆ

ನಾನಿರುವ ವರುಷದ ಕಡೆಗೆ

    ನೀನಿರುವೆ ಸತ್ವದೀ ಗುಡಿಗೆ

ಬೆಳಕಿನ ಪರಿಯಿರುವ

    ಶಾಂತಿಯಿರಲಿ ನಿನಗೆ-ನನಗೆ!

Saturday, October 3, 2020

ಯಾರ ಮರಣ?

ಬದುಕ ಬರಿಯುಡಿಗೆ ಕರುಳ ಬತ್ತಳಿಕೆಯಲಿ

ಬೆರಳ ದೇಗುಲದ ಒಡಕು ಮರುಕದಲಿ

ಹೊರಳಿ ಬರುವ ನಲವಿರುಳ ಬೀಳ್ಕೊಡುಗೆ

ಎರಕ ಹೊಯ್ಯುವ ಮತಿಗೆ ರವಿಯ ತೇಜದಲಿ

ಮೇರುಳಿತದಲಿ ಮಹಡಿ ಮೆಟ್ಟಲಿನ ಗತಿಯಲಿ

ಹೊಯ್ದಾಡುವ ಉಸಿರು ತೆರವ ತೇರೊಳಿತಿನಲಿ

ನಾಳಿಗೆಂಬಾಗುವ ನುಲಿವ ಕರುಣದ ಕರೆಗೆ

ಕುಹಕದಲಿ ಕೊರೆದಿಡುವ ಮೇರುತತ್ವದ ಕುಡಿಕೆ

ಒಡೆದು ಬಾಗಿಹುದು ಅಂತಿಮದ ಸಾರದಲಿ

ಉಳಿವ ಮುಷ್ಠಿಯ ಬೂದಿ ಭಸ್ಮದ ಅಣು ಕಲ್ಪಕೆ

ಯಾವ ಕರೆಯಾದರೇನು ಹೆಸರು ಬೇಕೇನು ಅದಕೆ

ಉಳಿವುದದೆ ಒಳಗಳದ ನಿಜದ ಸಂಚಲಕೆ

ನಾನು, ನಾನೇ, ನನ್ನದೆಂಬ ತಿರುಗು ಬುಗುರಿಯ ಭರಕೆ

ಕುಗ್ಗಿ ಕತ್ತಲೆಯ ಒಳಪದರವ ಹೊದಿಸುವುದಕೆ

ಏನು ಕಾರಣ? ಯಾರ ಹರಣ? ಯಾರ ಮರಣ? 

Friday, June 26, 2020

ಆತ್ಮ

ಆತ್ಮಕ್ಕೆ ತವರಿಲ್ಲ, ಆತ್ಮದಾದಿಗಳಿಲ್ಲ
ಆತ್ಮಕ್ಕರಿಯದ ಒಗಟು ಕವಲುಗಳಿಲ್ಲ
ಆತ್ಮಕ್ಕುದಿಸುವ ಬಯಕೆ, ಆತ್ಮಕ್ಕಿಳಿಯುವ ಒಳಿಕೆ
ಆತ್ಮದನುಕರಣೆಯ ಬವಣೆ ಬಾಧೆಗಳಿಲ್ಲ;
ಇರುವುದೊಂದರ ಒಳಿಪು, ತಿರುಗಿ ಬರುವ ಸುಳಿಪು
ತಿಳುವಳಿಕೆಯ ಕಳೆದು ಹೊಳಪುವುದದರ ಒಳಪು;
ಆತ್ಮಕ್ಕಿರುವುದೆ ಒಂದು, ಆತ್ಮಕ್ಕಾರದಿಹ ಬಿಂದು
ತೇಜಸ್ವಿ ಸಮರ್ಪಣೆಯ ಪರಿಭ್ರಮಣದಿ ಬೆಂದು;
ಒಂದುಗೂಡುವುದದು, ಒಂದೇ ಎಂಬುದರ ಒಳಗೆ
ಆದಿ ಅಂತ್ಯದ ಅರಿವಿಲ್ಲದ ಅಂತಃಕರಣದ ಬಳಿಗೆ
ಒಂದು ಒಂದರ ಜಡೆಯ ಅನಂತದಣಿ ಸರಣಿಯಲಿ
ನಾನು, ನಾನೇ, ನನ್ನದೆಂಬ ಬಯಕೆಯಿಲ್ಲ ಆತ್ಮಕ್ಕೆ!

Friday, May 3, 2019

ಪ್ರಶ್ನೆ


ಮಂತ್ರಗಳ ಮರೆಯಲಿ ಅವಿತ ಧರ್ಮ
ಅವಿಚಾರದ ಆಚಾರದ ಹೆಡಿಗೆಯ ತಳದಿ
ಉಳಿದು ಕುಳಿತ ಅಗುಳಿಗೆ ಹಾತೊರೆವ
ಕಾಗೆಗಳ ದೊಂಬರಾಟದೊಳು
ಮುಕ್ತಿ ಪಡೆಯುವೆವೆಂಬ ನಂಬಿಕೆಯಲಿ
ಗೋಪುರದ ತೇರಿಗೆ ಹೂವ ಹೊದ್ದಿಸುವ
ತೆಳು ಮನಸ್ಸಿನ ತಿಳಿ ಹೃದಯದವಗೆ
ನಂಬಿಕೆ ಬೇಕಲ್ಲವೆ, ಭಕುತಿಗೆ ಬರವೆ!

ಪದರ - ಪರದೆ


ನಿನ್ನ ಜೀವನದ ತೆಳುಪರದೆಯಿಂದಾಚೆ
ಹೊರನಿಂತು ಒಳಬರಲಾಗದೆ ತೆವಳಿದ
ಆ ಸುತ್ತು ಘಂಟೆಯ ಆಟದೊಳು
ತಿರುಗಿ ಬರುವುದೆಂಬ ಊಹೆಯ ಹೊದ್ದ
ಈ ಕಿರು ಮನಸಿನ ಒಸರಿಗೆ ಬಂದ
ಪರದೆಯ ಪದರ ಕೆಳಗಿಳಿಯುವುದೆಂಬ
ನಿಜದ ಬಯಲಿನರಿವಾಗಿರೆ
ತಿರುಗುತಿರೆ ಘಂಟೆ ಬೆಳೆಯುತಿರೆ ಶಂಕೆ
ಪದರಗಳ ಎಣಿಕೆ ಮೀರಿ ಹೋಗುತಿರೆ
ಸಿಗದಿರುವಂತಾಗಿದೆ ಊಹೆಯ ಪರದೆ
ಪದರದೊಳಡಗಿದ ನಿಜ ನಿನ್ನ ಬಯಲಿನಂಗಳದಿ
ನನಗಿಲ್ಲ ಸ್ಥಾನ ಅಲ್ಲಿ, ನಿನ್ನ -
ಪದರವೆ ಬೇರೆ, ನನ್ನ ಪರದೆಯೇ ಬೇರೆ.