Friday, July 6, 2012

ಮಾಟ


ಕಂದರದ ಹೊದರಿನೊಳಗೆ
ನಾ ಬದುಕುಳಿಯಲು
ಆ ಜೀವ ಚೇತನದ ಕಿಡಿ
ಬರುವುದೆಂದೋ?
ಅಂದಿನವರೆಗು
ನಾ ಈ ಸಮಾಧಿಯೊಳು
ಪರಿವೇಷ ಕಾಣದಿಹ
ಕುರುಡನಂತಿರುವೆ;
ಬರುವನಾದರೊ ಚಂದ್ರ
ಗ್ರಹಣ ಕೆಣಕುತಿರುವನು -
ಅನಿಸಿಕೆಯನೇ ಮುತ್ತಿರಲು
ಅಣಕು ಪರಿಯು.
ಚಿತೆಯೇ ಭಸ್ಮವಾಗದಿರಲು
ಚಿಂತೆಯೇತಕೆ
ನಿಸ್ವನವಾಗಿಹುದು,
ಮಾಟಗಾರ(ತಿ)ನ(ಯ)ವನೋ(ಳೋ)
ಬರುವುದಾದರೆ
ನಾ ಕುಣಿಯುವೆ ಅವನ(ಳ)
ಮಡಿಲಲಿ.

Wednesday, July 4, 2012

ಅರ್ಥವಿಲ್ಲದ ಪದ


ಏತಕೀ ಭಾಷೆಯ ಬಂಧನ
ಏಕೆ ಉದಿಸಿದೆ ಈ ಮನಸ್ಸಿನಾಕ್ರಂದನ
ಬವಣೆಯ ಹೊದ್ದು ಬದುಕುಳಿಯಲು
ಹಲುಬಬೇಕೆ, ಉಸಿರ ಹಿಡಿಯಬೇಕೆ?

ನಿಲುವ ಅಲುಗಿಸುವ ಸ್ಪಂದನವಿರೆ
ಬಾಳನೆ ರೂಪಿಸುವೆನೆಂಬ ಭರವಸೆಯು
ಕಲ್ಪನೆಯ ಸಿರಿಗೊಂಬೆಗೆ ರೂಪ ತುಂಬಿರೆ
ನಾಮ ಬೇಕೆ, ಬಿಂಬಕ್ಕೆ ಪ್ರತಿರೂಪ ಬೇಕೆ?

ಬಂದು ಹೋಗಿ ಸಂತೈಸುವ ಪ್ರೀತಿ
ಶಂಕೆ ರೂಪದಲಿ ಕೊರಗಿ ಬಳಲುತಿರೆ
ತನ್ನೆಲ್ಲವನ್ನು ಅಡವಿಟ್ಟ ಜೀವದ ತ್ಯಾಗಕೆ
ಪ್ರಶಸ್ತಿ ಬೇಕೆ, ಬಲವಿಲ್ಲದ ಪ್ರಶಂಸೆ ಬೇಕೆ?

ಹೆಜ್ಜೆ ಹೆಜ್ಜೆಗೂ ಹೂ ಮನಸ ಹೊದಿಸಿ
ಭರವಸೆಯ ಬುನಾದಿಯ ಅರಿವ ಸೂಸಿ
ಇಂದಿಲ್ಲದಿರೆ ನಾಳೆಯಿದೆಯೆಂದು ಪ್ರಾಣ ತುಂಬಿದವಗೆ
ಗದ್ದಲದ ಮಾತೇಕೆ, ಅರ್ಥವಿಲ್ಲದ ಪದವೇಕೆ?