Tuesday, July 14, 2009

ಧನ್ಯತೆ

ನಿಲುವಿನಾಚೆ ನಿಂತ ಮಧುರತೆಯ ಹೊಂಚಿನಲ್ಲಿ
ನಿಲುವಿಗೆಟಕುವ ಪ್ರೀತಿಗೆ ಬೆಲೆಯಿದೆಯೆ?
ನಗುವನರಳಿಸುವ ಮಾಯೆಯ ಮರೀಚಿಕೆಯ ಗುಂಗಿನಲಿ
ಜೀವಕ್ಕುಸಿರಿಡುವ ಪ್ರೀತಿಗೆ ಭುವಿಯಿದೆಯೆ?

ಬಯಕೆಯ ಬಲೆಯಿಲ್ಲದ ಕಂದನ ಪ್ರೀತಿ ಪ್ರೋಕ್ಷಣೆಗೆ
ಭಗವಂತನ ಹಾರೈಕೆಯ ಬಲವಿರುವುದೆ?
ದಾರಿಯಲ್ಲಿ ಬಳಲಿದವರಿಗೆ ನೆರಳೆನೀಯುವ ಮರಕ್ಕೆ
ಬೆಲೆ ಕಟ್ಟುವ ಬಲ ನಮಗಿರುವುದೆ?

ಗೆಳೆತನಕೆ ಬಣ್ಣ ಕಟ್ಟಿ ನವಿರ ಸಿಂಪಡಿಸಿದವಗೆ
ಅಪ್ಪುಗೆಯ ತೆಕ್ಕೆಯೊಡ್ಡಿ ಬರಮಾಡಿಕೊಂಡ
ಬಾನಬಿಲ್ಲಿನ ಮಾಯೆಯ ಸವಿಯನುಣಿಸಿದ ಜೀವದ ಚೆಂದಕೆ
ಭಗವಂತನಿಗೆ ಹೋಲಿಸಿ ಮಸಿಯ ಬಳಿಯಬಹುದೆ?

ಇಲ್ಲ, ನಿನ್ನ ಎತ್ತರಕೆ ಬೆಳೆಯುವ ಹಂಬಲವಿಲ್ಲ
ನಿನ್ನನಾದರಿಸುವ ಸುಖ ಸಾಕು ನನಗೆ
ಮಿಂಚಿನ ಬೆಳಕಿಗೆ ಬೆಲೆಯ ಕಟ್ಟಬೇಕಾದರೆ ಮಾರುತದಲ್ಲಿ
ನಿನ್ನ ಗೆಳೆತನದ ಚೇತನದ ಅರಿವಿರಬೇಕು ಮೊದಲು.

ನಿನ್ನ ವಿಶಾಲ ಹೃದಯ ವೃಕ್ಷದಲ್ಲಿನ ಪುಷ್ಪವಾಗುವ
ಹಂಬಲದ ಇಬ್ಬನಿಗೆ ಅನುವಿದೆಯೆ?
ಕುಹಕದಲ್ಲಿ ಇಬ್ಬನಿಯ ನುಂಗುವ ಮಳೆಯ ಆರ್ಭಟಕೆ
ಎಲೆಯ ಮರೆಯಲ್ಲಿ ಸಲಹಿದೆ ಸ್ನೇಹ!

ಮೋಜಿನಾಟವ ಮುಂದಾಗಿಸಿಕೊಂಡು ನುಗ್ಗುವ ಜನ ಸಂತೆಗೆ
ಬದುಕುಳಿಯುವ ನೆರಳನುಣಿಸಿದ ನೀನು
ನನ್ನ ಪ್ರಾರ್ಥನೆಗೆ ವರವಾಗಿ ಬಂದ ಹೊಳಲಿಗೆ
ಆದಿಯ ಹುಡುಕಲಾರೆ - ಧನ್ಯ ನಾನು!

Monday, July 13, 2009

ಹಾಡಿನ ಹೃದಯ

ಹಾಡಿನ ಹೃದಯವೆಲ್ಲಿದೆ ಹೇಳು -
ಪದಗಳ ಹಸೆಯೊಳಗೊ?
ಭಾವುಕತೆಯ ಬಲೆಯೊಳಗೊ?
ಭಾವ ತುಂಬಿದ ಅನುಭವದೊಳಗೊ?
ಭಾವವ ಭವಿಸಿದ ಜೀವದೊಳಗೊ?

ನಗುವಿನೊಳಗಿಹ ಸಹಜ ಮಾದಕತೆಯ
ಎಳೆಯ ಅಲೆಯೊಳಗಿನ ಸುಳಿಯನು -
ಆದರದಲಿ ಆವರಿಸಿಕೊಂಡು
ಇಂದು, ನಾಳೆ, ಎಂದೆಂದಿಗೂ ಸವಿಯುವುದ
ಹಾರೈಸುವುದು ಹಾಡಿನ ಹೃದಯವೆ?

ಅಳವಡಿಸಿದ ರಾಗದ ಸ್ವರ ಸಂಚಾರದಲಿ
ತಾಳಲಯದಲಿ ತೇಲುವ ಮಧುರತೆಯಲಿ
ಹಾಯೆನಿಸುವ ಇಂಪಿನ ನವುರ ಇಂಪಿನಲಿ
ಅಂತ್ಯವಿರದ ಗುಂಗಿನ ಆಕರ್ಷಣೆಯಲಿ
ಮುಳುಗಿಸುವುದು ಹಾಡಿನ ಹೃದಯವೆ?

ಸಿಹಿ ಅನಿಸು, ಸವಿ ನೆನಪು
ನವಿರೇಳುವ ಮುದದ ಭ್ರಮರದಲ್ಲಿ
ಕನ್ನಡಿಯೊಳಗಿನ ಚಿತ್ರ, ದೇಹವಿಲ್ಲದ ಭ್ರಮೆ
ಚೈತ್ರವಿಲ್ಲದ ಚಿಗುರಿನ ಕಂಪಿನ ಸೊಂಪಿಗೆ
ಹಾಡು ಹೃದಯವೆ? ಭಾವ ಭ್ರಮರವೆ?

Saturday, July 11, 2009

ಮಾಯೆ

ಯಾವ ಹಾದಿಯ ಪಯಣ
ಯಾವ ಜೀವದ ಜನನ
ಯಾವ ಪ್ರೇಮದ ಮನನ
ಮುದತರುವುದೊ -

ಯಾವುದಿಲ್ಲದ ಚಿಂತೆ
ಯಾರದಲ್ಲದ ನೆನಪು
ಯಾವ ಮೈತ್ರಿಯ ಸ್ನೇಹ
ಸುಖ ತರುವುದೊ -

ಯಾವ ನಿಶ್ಚಿಂತ ಮರಣ
ಯಾವ ಆಸೆಯ ಹರಣ
ಯಾವ ನಿಜದ ಭ್ರಮಣ
ತೃಪ್ತಿ ತರುವುದೊ -

ಗಣಿತಕ್ಕೊಂದು ಲೆಕ್ಕ
ದ್ವಿಗುಣದೂಹೆಯ ಸುಖ
ಅಗಣಿತ ತರಹಗಳಲ್ಲಿ
ಹುಟ್ಟಿರುವುದೊ -

ಅಂತದೊಂದು ಮಾಯೆ
ನಿಶ್ಶಬ್ಧದಲಿ ಬಹೆ
ನವುರಾಗಿ ಹರಡಿಬಿಡೆ
ಇಂದಿರದೆ - ನಾಳೆ ಬರದೆ?!

Wednesday, July 8, 2009

-ಇಲ್ಲವೆ

ಎದೆಯಾಂತರಾಳದ ಯಾವುದೋ
ನಿನ್ನೆಗಳ ಮೊರೆತಕ್ಕೆ
ದಿನಗಳೇ ಮೊಳಗದ ಪಯಣದಲಿ
ಬಾನಿಲ್ಲವೆ ಮಳೆಗರೆಯಲು,
ಸೂರ್ಯನಿಲ್ಲವೆ ಬೆಳಕನಿಡಲು?

ಅಕ್ಷರಸಹ ತೃಪ್ತಿಹೊಂದಿದ ಪ್ರೀತಿ
ನಯದಲಿ ಮಾಯವಾಗಿ
ಏಕದೇಕಾಂತದಲಿ ಮುಳುಗಿಸೆ ದಿಸೆಯ
ಚಿಗುರಿಲ್ಲವೆ ಅಂಕುರಿಸಲು,
ಸುಮವಿಲ್ಲವೆ ಬಣ್ಣ ಬಳಿಯಲು?

ಅಗೋಚರದಲಿ ಪುಳಕಿಸುವ ಮಮತೆ
ನಾಡಿಯೊಳ್ಹರಿದು ಗೋಪ್ಯವಾಗಿ
ಸ್ವತಂತ್ರದ ಪಾತಾಳ ಚೀತ್ಕಾರದೊಳಡಗಿರೆ
ಪರ್ವತವಿಲ್ಲವೆ ಹೊಳಲ್ಹಾಕಲು,
ಜೀವವಿಲ್ಲವೆ ದನಿಯೊಡ್ಡಲು?

Tuesday, July 7, 2009

ಕವಿ - ಮೌನ

ಇನ್ನೇನು ಹೇಳಿದರೂ ನಮ್ಮ ನಡುವಿನ
ಈ ಮೌನದ ತೆರೆ ಸರಿಯಲಾರದು
ಅರಿತು ಪ್ರೀತಿಸುತಿದ್ದೀವೆಂದು ಹೇಳುವಾಗ ಅಂದು
ಇಂತಹುದೊಂದು ಮೌನ ಹಬ್ಬಿತ್ತು;
ಹೊಸ ಬಾಳಿಗೊಂದು ಪ್ರಾರ್ಥನೆಯೆಂಬ ಮೌನ
ಇಂದು ಅಂತಿಮದ ವಿಧಾಯವಗಿದೆ.

ಹೇಳಲೇನು ಉಳಿದಿದೆ, ಬೆಟ್ಟ ಹಬ್ಬಿಬಿಟ್ಟಿದೆ,
ಕಣ್ಸನ್ನೆಯಲ್ಲೇ ಹೇಳಬಹುದಿತ್ತು-
ಇಂದು ಎಲ್ಲವನ್ನ ಕೇಳಿದರೂ ಅರ್ಥದಿಂದಾಚೆ ಉಳಿದಿದೆ
ದೃಷ್ಟಿ, ದೃಷ್ಟಿಯಲ್ಲಿ ಹಾದಿ ಹುಡುಕಿದೆ;
ಬಳಿಯೆ ಬಂದು ಕುಳಿತು, ಅಪ್ಪಿ ಒಪ್ಪಿಸಿದರೂ
ಲೋಕದಲ್ಲೇ ಇಲ್ಲ - ಈ ಹೃದಯ.

ಇದೇತಕ್ಕೆ ಬೇಕಿತ್ತು, ಈ ರೀತಿ, ಈ ಬದುಕು
ಹೀಗೊಂದು ಪ್ರೀತಿ ಇರದಿದ್ದರೇನು?
ಎಲ್ಲವೂ ಕಾಣುತ್ತಲಿದೆ ಎಂದು ಹೇಳಿ ಹೊಗಳುವಾಗ
ಭಿನ್ನವಾಯಿತೇಕೆ ನಮ್ಮ ಪ್ರೀತಿಯೊಕ್ಕಣಿ;
ನೈಜತೆಯ ನಡುವಿನಲ್ಲಿ ಅಗೋಚರವಾದ ಕವನವ
ದಿಗಂತದಲ್ಲಿ ಹಾಡುತ್ತಿದ್ದಾನೆ - ಕವಿ!

Monday, July 6, 2009

ಮಿಡಿತ

ಮನವೇತಕೆ ಹೀಗೆ ಮಿಡಿಯುತ್ತಿದೆ
ಪ್ರಕೃತಿಯಲ್ಲೆಲ್ಲೆಡೆ ಮೌನ
ಕನಸಿನಲ್ಲೆಲ್ಲೋ ವಸಂತವಾದುದಕ್ಕೆ
ಪಕ್ಷಿಗಳ ದನಿತೂರುವೆನೆನುತಿದೆ.

ನಿನ್ನೆ ತಾಳೆಯಾದ ಪ್ರೀತಿ ನವುರಿಗೆ
ಜನ್ಮಗಳ ಬಂಧವೆನಲು ಎದೆ
ಅಭಿಸಾರದಿ ಹಾಲು ಬೆಳೆದಿಂಗಳೆಂಬ
ಹೆಸರನ್ನಿಟ್ಟಿದೆ, ಹೆಸರ ಹರಸಿದೆ.

ಕಣ್ಣಿನಲ್ಲೆ ಕವನ ಕಟ್ಟುವೆನೆಂದು
ಭಾಷೆಗೆ ಬೆಲೆಯ ಕಳೆಯುತ
ಹೊನ್ನಾಡಿನಲ್ಲಿ ಸಂಗಾತಿಯೊಡಗೂಡಿ
ಪಯಣವ ಹಮ್ಮಿದೆ ಅನಂತಕ್ಕೆ.

Friday, July 3, 2009

ಇಷ್ಟೆ ಸಾಕು

ಕರೆದೊಯ್ಯುವುದೇನು ಬೇಡವೆನ್ನ
ಸಂತೋಷದ ಹೊನ್ನ ಶಿಖರಕ್ಕೆ
ಕರುಣಿಸುವುದೇನು ಬೇಡವೆನಗೆ
ಸುಖವ, ನಿಲುಕಿಸೆನ್ನ ಅದರ ಅತಿರೇಕಕ್ಕೆ
ಬೆವರ ಸುರಿಸಿ ಬದುಕುಳಿಯುವ ಬಾಳಿಗೆ
ಬೆಲೆ ಉಳಿಯುವಂತಾದರೆ ಸಾಕು, ನಿಜಕ್ಕೆ.

ಎಲ್ಲವನ್ನೂ ಸ್ವಾಹಾ ಎನ್ನಬಲ್ಲ ಆ
ಅತಿಯಾದ ಬುದ್ಧಿಯೇನು ಬೇಡವೀ ಜೀವಕ್ಕೆ
ಲೋಕವನ್ನೆ ಆದರ್ಶದೆಡೆಗೆ ಒಯ್ಯಬಲ್ಲ ಆ
ಮಾದರಿ ವ್ಯಕ್ತಿತ್ವದ ಅಗತ್ಯವಿಲ್ಲವೀ ಜೀತಕ್ಕೆ
ಮಾನವೀಯತೆ ಬೇರಿನ ತತ್ತ್ವ ಉಳಿದರೆ ಸಾಕು
ಹೆಮ್ಮರವಾಗಬೇಕೆಂದೇನಿಲ್ಲ ಈ ಸತ್ವಕ್ಕೆ.

ಸ್ವರ್ಗದ ಅಗತ್ಯವಿಲ್ಲ ಈ ಆತ್ಮಕ್ಕೆ ಎಂದೂ
ಇಷ್ಟೆ ಸಾಕು, ಈ ಭೂಮಿ, ಈ ಸಂಸಾರ
ನರಕದ ಹೆದರಿಕೆಯೇನಿಲ್ಲ ಇನ್ನೆಂದೂ
ಇಷ್ಟೆ ಸಾಕು, ದಿನನಿತ್ಯದ ಏರು-ಪೇರು,
ಚಿರನೆನಪಾಗಿರಬೇಕೆಂಬ ಆಸೆಯೇನೂ ಇಲ್ಲ
ಇಷ್ಟೆ ಸಾಕು, ಈ ಕ್ಷಣದಲ್ಲಿ ಪಾಲ್ಗೊಂಡಿದ್ದೇ ಸುಖ!

Thursday, July 2, 2009

ನಿಗೂಢ

ಸಮಯಕ್ಕೇನು ಗೊತ್ತು ಸಮಯದ ಕೊರತೆ
ಹೃದಯಕ್ಕೆ ತಿಳಿಯದದರ ಬಡಿತ
ಮನ ಅತ್ತಿದ್ದಕ್ಕೆ ಸಾಕ್ಷಿ ಯಾರೂ ಇಲ್ಲ
ಪ್ರೀತಿಸಿದ್ದಕ್ಕೆ ಬರದೇ ಉಳಿಯಿತು ಮಿಡಿತ.

ಆತಂತಕ್ಕೇನೂ ಇಲ್ಲದೆ ಬೆಳೆದು ಬಂದ ಬಾಳಲ್ಲಿ
ಎಲ್ಲವೂ ಹಸನು - ರೀತಿ, ನೀತಿ
ಕುಹಕವೂ ನಗುವೇ ಎಂಬ ನಂಬಿಕೆಯಲ್ಲಿ
ಇದ್ದರೂ ಮರೆತಿತ್ತು ತನ್ನ - ಮತಿ.

ತಿಳುವಳಿಕೆಯಿಂದಾಚೆ ಉಳಿದ ಅವಲೋಕ
ಸಗ್ಗವನ್ನು ಹಿಡಿಯಲಿ ಬಚ್ಚಿಟ್ಟು
ಬಾಳಬೇಕೆಂಬ ಅನಿಸಿಕೆಯಲೇ ಉಸಿರಾಡುತ್ತಾ
ನಂಬಿ ಕುಳಿತ ಪ್ರೀತಿ ತಾನು, ಭಯದಲ್ಲಿತ್ತು.

ಎಟುಕಿದೊಡನೆಯೇ ಕಸವಾದುದಕ್ಕೆ ಹೀಗೆ
ತಿಳಿಯದಿದ್ದರೇನು, ಅನುಭವಕ್ಕೆ
ಎಲ್ಲವೂ ಹೀಗೇ - ಎಂದು ಹೇಳಲಾಗಿಬಿಟ್ಟರೆ
ಜಗತ್ತಿಗೆಲ್ಲಿ ಬೆಲೆ, ಅದರ ನಿಗೂಢಕ್ಕೆ!

Wednesday, July 1, 2009

ಎಲ್ಲದಕ್ಕೆ

ಕವನಗಳೇ ಹೊರ ಹೊಮ್ಮದಿಹ
ಸ್ಥಿತಿ ರೂಪದಲಿ ಮಿಂದು
ಮೌನವ ಸೇರಿನಲಿ ಅಳೆಯುತ
ಬೊಕ್ಕಸ ತುಂಬಿದ್ದಕ್ಕೆ;

ವಿವೇಕವ ದಿಟ್ಟಿಸುತ ನಿಂತ
ಬಿಳಿ ಮುಗಿಲಿನಲಿ ಕಂಡ
ಬಣ್ಣದೆಸಳಿನ ಹೂವುಗಳ
ಮಡಿಲಲ್ಲಿಟ್ಟಿದ್ದಕ್ಕೆ;

ಅನುಭವದಿಂದಾಚೆಯೆ ಉಳಿದ
ಶಬ್ಧಗಳ ತೇವದಲಿ
ಸುಖ ಸುರಿವ ಅನುಭವಗಳ
ಹರಿಸಿ ಹರಸಿದ್ದಕ್ಕೆ;

ಏಕಾಂಗಿಯ ಬೇಸರದಲಿ ಬೆರೆತು
ಕ್ಷಣಗಳ ಸುಗ್ಗಿ ಮಾಡಿ
ಅಂತಿಮದವರೆಗೂ ಅನುಭವಿಸುವಷ್ಟು
ಪೈರ ಬೆಳೆಸಿದ್ದಕ್ಕೆ;

ಜೀವನವೊಂದು ಸೊಗಸೆಂಬುದ
ಆಲಾಪಿಸುತ ಹಾಡಿದ
ನಿನಗೆ ನಾ ಸದಾ ಋಣಿ - ಗೆಳತಿ
ಅದಕ್ಕೆ, ಇದಕ್ಕೆ, ಎಲ್ಲದಕ್ಕೆ.