Friday, May 3, 2019

ಪ್ರಶ್ನೆ


ಮಂತ್ರಗಳ ಮರೆಯಲಿ ಅವಿತ ಧರ್ಮ
ಅವಿಚಾರದ ಆಚಾರದ ಹೆಡಿಗೆಯ ತಳದಿ
ಉಳಿದು ಕುಳಿತ ಅಗುಳಿಗೆ ಹಾತೊರೆವ
ಕಾಗೆಗಳ ದೊಂಬರಾಟದೊಳು
ಮುಕ್ತಿ ಪಡೆಯುವೆವೆಂಬ ನಂಬಿಕೆಯಲಿ
ಗೋಪುರದ ತೇರಿಗೆ ಹೂವ ಹೊದ್ದಿಸುವ
ತೆಳು ಮನಸ್ಸಿನ ತಿಳಿ ಹೃದಯದವಗೆ
ನಂಬಿಕೆ ಬೇಕಲ್ಲವೆ, ಭಕುತಿಗೆ ಬರವೆ!

ಪದರ - ಪರದೆ


ನಿನ್ನ ಜೀವನದ ತೆಳುಪರದೆಯಿಂದಾಚೆ
ಹೊರನಿಂತು ಒಳಬರಲಾಗದೆ ತೆವಳಿದ
ಆ ಸುತ್ತು ಘಂಟೆಯ ಆಟದೊಳು
ತಿರುಗಿ ಬರುವುದೆಂಬ ಊಹೆಯ ಹೊದ್ದ
ಈ ಕಿರು ಮನಸಿನ ಒಸರಿಗೆ ಬಂದ
ಪರದೆಯ ಪದರ ಕೆಳಗಿಳಿಯುವುದೆಂಬ
ನಿಜದ ಬಯಲಿನರಿವಾಗಿರೆ
ತಿರುಗುತಿರೆ ಘಂಟೆ ಬೆಳೆಯುತಿರೆ ಶಂಕೆ
ಪದರಗಳ ಎಣಿಕೆ ಮೀರಿ ಹೋಗುತಿರೆ
ಸಿಗದಿರುವಂತಾಗಿದೆ ಊಹೆಯ ಪರದೆ
ಪದರದೊಳಡಗಿದ ನಿಜ ನಿನ್ನ ಬಯಲಿನಂಗಳದಿ
ನನಗಿಲ್ಲ ಸ್ಥಾನ ಅಲ್ಲಿ, ನಿನ್ನ -
ಪದರವೆ ಬೇರೆ, ನನ್ನ ಪರದೆಯೇ ಬೇರೆ.

ಪುರಸ್ಥ


ನನ್ನೊಲವಿನ ಬದುಕಿನ ಕಥೆಯ ಕೇಳಿರೆ
ಹಲುಬುವ ಮನಸಿನ ವ್ಯಥೆಯ ಸೀಳಿರೆ
ನಿಲುವ ಬದಲಿಸಿ ಉಳಿವ ಬೆಳಗಿಸಿ
ಉರಿಯುವ ತನುಮನ ಸ್ಥವಿರ ನೀಗಿರೆ
ಒಡನೆ ಬಾ, ಎಡವಿ ತಾ, ಮುಗುಳ
ಹೊರಡುವ, ನವಿರಸುಳಿ ಹಾರುವ
ಇರುವ ಸ್ಥಾನಕೆ ನಿನ್ನ ಜವನಿಕೆ
ಮದಿರ ಮೀರುವ ಕಣ್ಣಿನಂದಕೆ
ಹನಿಯ ಹೊರಸುತ, ದುಃಖ ಒರೆಸುತ
ಬಂದೆಬಿಡುವೆ ನಿನ್ನೊಡಲ ಪುರಕೆ

ಹೇಗೆ ಬದುಕಲಿ?


ಹುಟ್ಟಿನರೆಹೊಟ್ಟೆಗೆ ಅಂಬಲಿಯ ತಂಬಿಗೆಯನೊಡ್ಡಿ
ಮಡಿ ಮುಟ್ಟು ಕರುಣೆಗಳ ಗುಣ ಬಳಿದು
ಶಾಂತಿ ಆಗರದ ತುಂಡು ಬಟ್ಟೆಯನು
ಕನಿಕರದ ಬಗೆಯೊಳು ಬಿಳಿ ಬಳಿದು
ಸಾರ್ಥಕತೆಯ ಬುನಾದಿಯ ಉಗಿದು
ತೇಲಿ ಬಂದ ತೆವಳಿನ ತಿರೆಯೊಳು
ಜೀವನದ ಒಸಗೆ ಕಲ್ಪಿಸಿ
ಭವಿಸು ಎಂದು ಸಾರಿ ಹೇಳಿದರೆ
ಬದುಕಬಹುದೆ ಹೇಳು -
ನಿನ್ನೊಡನಾಟವಿಲ್ಲದಿರೆ?
ತಿರುಳಿರದ ಕಾಯಿಯಂತಾಗಿದೆ
ದೇವರಿಗೊಪ್ಪಿಸಲೆಂದು ಹೋದರೆ ಜೀವವ
ತಣಿಸು, ಬೆಳೆಸು, ಸವೆಸು ಕರ್ಮವ
ಇಂದು, ನಾಳೆ, ಬದುಕಿರುವವರೆಗೆ ಎಂಬುದ
ತಿಳಿಹೇಳಿ ತಲೆಸವರಿ ಕಳುಹಿಸಿ
ಕಿಲಕಿಲನೆ ಒಳನಗುವ ಜನರೊಂದಿಗೆ
ನೀನಿಲ್ಲದೆ ಹೇಗೆ ಬದುಕಲಿ?

ಯಾರಾಗಿರಬೇಕು?


ಇಂದು ನಾನು ಯಾರಾಗಿರಬೇಕು -
ನೀನೆಣಿಸಿದಂತೆಯೋ, ನೀನುಡಿಸಿದಂತೆಯೋ?
ನಿನ್ನ ಪರಿಕಲ್ಪನೆಯಂತೆಯೋ -
ನಿನ್ನ ಕಿರುನಗೆಯಂತೆಯೋ?
ನಿನ್ನ ಪುಲಕದೊಲುಮೆಯಂತೆಯೋ -
ನಿನ್ನ ಹರವಿನಾಹ್ಲಾದಂತೆಯೋ?
ಹೇಳಿದೊಡನೆಯೆ ಬಳಿ ಬಂದು
ಬಂದೆನೆಂದು - ಹೇಳದಿದ್ದರೂ
ತಿಳಿದುಬಿಡುಯೆನಲು, ಕವಿದ -
ಕತ್ತಲಲೂ ಮಿನುಗುವ ನಕ್ಷತ್ರದಂತೆ
ಇದ್ದರೂ ಇರದಂತಹ ಸುಖ -
ನೀಡುವ ಆ ಹರಡಿದ ತನ್ಮಯತೆಯ
ಗುಂಗಿನಲಿ ನಾನು ಇಂದು
ಯಾರಗಿರಬೇಕು?

ನೀನಿಲ್ಲದಿರೆ


ನನ್ನ ಮತಿಯ ಪರಿಮಿತಿಯವರೆಗೆ
ಹೃದಯವಿದು ಕ್ಷುಲ್ಲಕವೆಂಬುದ ಅರಿವೆ
ಎನ್ನ ಮನದ ರೀತಿ ರಿವಾಜಿನ ಪರಿಗೆ
ಭಾವವೆಲ್ಲ ಸೊಲ್ಲವೆಂಬುದ ತಿಳಿಯೆ
ನಿನ್ನ ಹೊಂಗನಸಿನ ಸವಿಯಿರುವವರೆಗೆ
ಮುನ್ನ ಬಾರದವುಗಳನೆಲ್ಲ ಬಳಿಯೆ
ಏಕೆ ಹೇಳು ಈ ಜೀವ, ನೀನಿಲ್ಲದಿರುವವರೆಗೆ.

ಬಯಕೆ ಹೊಮ್ಮುವ ಬದುಕ ಬತ್ತಳಿಕೆಯೊಳಗೆ
ಸೀಳಿ ಹೊರಬರುವ ಬಾಣದ ಕಣ್ಣಿನ ಸುಳಿಗೆ
ನಿಲುಕ ಮೀರುವ ಬಿಗಿದ ಅಪ್ಪುಗೆಯ ಒಪ್ಪಿಗೆ
ನಾನಲ್ಲವೆ ಬಲಿ, ನಿನ್ನ ನಲಿವ ನೃತ್ಯದ ಪಾದಕೆ
ಅರೆಮರೆಯಾಗಿ ಮೂಕ ಮಾತಗಿ ಬೆದೆಕೆ
ಹಬೆಯಾಡುವ ಸವಿ ಬೆಲ್ಲದ ಸಿಹಿ ಚೆಂದಕೆ
ಏಕೆ ರುಚಿ ಬೇಕು ಹೇಳು, ನೀನಿಲ್ಲದಿರುವವರೆಗೆ.

ನಾನೇತಕೆ?


ಇರುಳ ತಿರುಳಿಗೆ ಒಡಲ ಒಡ್ಡಿರೆ
ಮರುಳ ಮನಸಿನ ಮಡಿಲ ಹೊದ್ದೊಡೆ
ಕರುಳ ತೆಪ್ಪದ ಸರಿವ ಕೆರೆಯೊಳು
ನಿನ್ನೊಲವಿನ ನೆರಳ ಹೊಳಲ ಹುಡುಕುವೆ.

ಒಲವಿನಳಲ ಕಿರು ಚಿಗುರ ಸೀಳಿರೆ
ಒಳಲೆ ತುಂಬುವ ಕಿರು ಹನಿಯ ಬೆಳೆಸಿರೆ
ಹೂವಿನೊಡಲಿನ ಕಂಪಿನರಮನೆಯೊಳು
ನಿನ್ನೊಲವಿನ ಹೆರಳ ಸಪ್ಪಳವ ಅಳೆಯುವೆ.

ಬಳುಕಿ ಬಾ, ತಿರುತಿರುಗಿ ತಾ
ನಿನ್ನ ಕಳಚಿದ ನೆನಪ ಮರುಹೊದಿಸು ಬಾ
ನಾಳೆಯೇತಕೆ ಇಂದು ಕಳೆಯಲಿ
ನೀನುರುವವರೆಗೆ ನನಗೇಕೆ ಕಳವಳಿ!

ಬಂದೆಯಾದರೆ ಬರದಿರಲು ಭಯವು
ನನ್ನ ಹೆಸರ ಹೇಳಲಾಗದೆ ನಲುಗಿದಾ-ಹದವು
ನಿಲ್ಲಲಾಗದೆ ಹರಿದು ಹೋಗಲು
ಕಲ್ಲು ಕರಗದೆ, ಕರುಳು ತುಂಬದೆ, ಉಳಿದುದೆಲ್ಲವು ಮಾಗಲು.

ಇರಲಿ ಹೋಗು, ಮರಳದಿರಲೇಕೆ ಭಯ
ಮುಗಿಲ ಮುಚ್ಚಲು ಇಲ್ಲವೆ ತಾರೆಗಳ ಕೊಳ
ಒಂದ ಎಸೆದರೆ ಎರಡು ಬರುವಲ್ಲಿ
ನಾನೇತಕೆ ಹೇಳು ನಿನ್ನ ತೆರದಲ್ಲಿ.