Friday, May 11, 2012

ಮೌನ ಮಸಣ


ಮುಂದೆ ನೋಡಿರೆ ಬರಡು
ಹಿಂದೆ ನೋಡಿರೆ ಬರಡು
ಎತ್ತಲೂ ಮಸಣ ಮೌನ;
ತೊಟ ತೊಟನೆ ಸೋರಿರುವ
ಮಳೆಯ ಹನಿಹನಿಗೆ
ಭುವಿಯ ತೇಕುವ ಎದೆಯ
ಅನಾವರಣ.

ಎಲೆಯಿರುವ ಮರಗಳಿಗೆ
ಹಕ್ಕಿಗಳ ಹಾತೊರಿಕೆ
ಹಸಿರ ಹುಲ್ಲಿನ ಬಣ್ಣ
ಹಚ್ಚ ಹಳದಿ;
ತೊಗಲ ಬಿಟ್ಟಿರುವ ಮರ ಮೂಲಿಕೆಗಳೆಲ್ಲ
ಹೊರಟು ವಾಯು ಸೇವನೆಗೆ
ಭಕ್ತಿ - ಭಯದಿ.

ನೆತ್ತಿ ಮೋಡಗಳನೆಲ್ಲ
ಒತ್ತಿ ತೂರುವ ಗಾಳಿ
ಪರಿವೇಷ ಮುಟ್ಟಿರಲು
ಹಿಮದ ಬಣ್ಣ;
ನಮ್ಮನೇ ನಂಬಿರುವ
ಅಡಿಯ ಬಿಡದಿಗಳೆಲ್ಲ - ಈ ಶವಸಂಸ್ಕಾರದೊಳು
ಮೌನ ಮಸಣ.