Tuesday, August 9, 2011

ನಂದನವನ

ಕಂದನ ನಂದನವನದೊಳಗೆ
ಆಟಿಕೆಗಳು ಇಲ್ಲೆಲ್ಲ,
ಭುವಿಯಾಗಸ ತಾ ಚಂದಿರನು
ಚೆಂದದ ಕೈಗಳ ಚೆಂಡುಗಳು.
ಕಾರ್ಮುಗಿಲಾಗಸ ಕತ್ತಲೆಯು
ನಿದ್ರಾ ಮಂಪರು ಕನವರಿಕೆ
ಅಂಕಣದಾಗಸ ತಾರೆಗಳು
ಮಂಪರು ಕನಸಿನ ಚುಕ್ಕೆಗಳು,
ಆಗಸದಲ್ಲಿನ ಇವುಗಳನು
ಬಿಡಿಸಿಹಳ್ ತಾಯಿ ಅಂಗಳದಿ
ಬಗೆ ಬಗೆ ಅಂಕದ ರಂಗೋಲಿ.
ಬಾನಿನೊಳಗೆಯೇ ಕದ್ದೋಡಿ
ಭುವಿಯಾ ಮೇಲಿನ ಮೊಲವದುವೆ
ಬೆಣ್ಣೆಯಾಸೆಗೆ ಮೇಲೋಡಿ
ಚಂದಿರನೊಳಗೆಯೆ ಅಡಗಿಹುದು.
ಭುವಿಯಾ ಮೇಲ್ಗಣ ಚಿಟ್ಟೆಗಳು
ಎನ್ನೆಯ ಚೆಂದದ ಬಟ್ಟೆಗಳು
ಇಂತಿಹ ನಂದನವನವನ್ನೇ
ನೀಡಿಹ ದೇವಗೆ ನಮೋನಮೋ.

Thursday, August 4, 2011

ಯಾರು ಬಾರರು

ಯಾರು ಬಾರರೀ ಗುಡಿಗೆ
ಯಾರು ಬಾರರು
ವಿಘ್ನವಾದ ದೇವನ್ಹೊತ್ತ
ಈ ಭವ್ಯ ಗುಡಿಗೆ
ಯಾರು ಬಾರರು.

ನಿರ್ವಿಘ್ನಮಸ್ತುಯೆಂದು
ಆ ಗುಡಿಯಲಿ ಅವರು
ದೇವನ ಪೂಜಿಸಿಹರು
ಕೈ ಕಾಲ್ಗಳ ಕಡಿದುಕೊಂಡು
ಈ ಗುಡಿಯಲಿ ಕುಳಿತ ದೇವನು
ಹೇಗೆ ಅಲ್ಲಿಗೆ ತೆರಳನು.

ಯಾರು ಬಾರರೀ ಗುಡಿಗೆ
ಯಾರು ಬಾರರು,
ಧೂಪ ದೀಪಾರತಿಯ ಬೆಳಗೆ
ಕವಿದ ಕರಿಯ ತೊಳೆಯಲು
ಯಾರು ಬಾರರು.

Wednesday, August 3, 2011

ಅಹುದೇ

ರಂಗನೇ ಬಾರದಿಹ
ಈ ಶೃಂಗ ಸಭೆಯಲಿ
ಕೊಳಲನೂದುವನಾರೆ?
ಮನ್ಮಥನಿರದ
ವಸಂತ ಕಾಲದಿ
ಪ್ರೇಮವು ಮೊಳೆಯುವುದೇ?

ಪ್ರೇಯಸಿ ಬಾರದ
ರಾತ್ರಿಗಳದುವೆ
ಶೀಘ್ರವಾಗಿಹುದೇ?
ಭುವಿ ಮೇಲ್ಮೆಯ ಜಲ
ಮೋಡಗಳಾಗದೆ
ಮಳೆ ತಾ ಬರಬಹುದೇ?

ಮಾವ್ಮರ ಚಿಗುರದೆ
ಕೋಗಿಲೆ ಕಂಠದ
ಸವಿದನಿ ಕೇಳುವುದೇ?
ಸುಂದರ ಸ್ವಪ್ನದ
ಅನಿಸಿಕೆ ಭವಿಸದೆ
ಪ್ರೀಣನ ನನಸಿಹುದೇ?

ಈ ಜನ್ಮದ ಸಿರಿ
ಸಿರಿ ಜಲವಾಗದೆ
ಅಲೆಗಳು ಬರಬಹುದೇ?
ಈ ಪ್ರೇಮದ ಫಲ
ಫಲವತ್ತಾಗದೆ
ಪ್ರೇಯಸಿ ನೀನಹುದೇ?