Sunday, July 17, 2011

ಸಿರಿ

ಭೂಮಿಗಿಲ್ಲದ ಸೊಬಗು
ಭಗವಂತನಿಗೆಲ್ಲಿಹುದು
ಪಾತಾಳ ಭುವಿಯಾಗಸ
ಭಗವಂತನೊಳಗಿಹುದು
ಹೊರಗಿರುವ ತರವೆಲ್ಲ
ಕುಂಕುಮದಿ ಹೋಮ
ಕರಿಬಣ್ಣ ಮೆತ್ತಿರುವ
ಧೂಪ ದೀಪಾರತಿ.
ಗರ್ಭ-ಗುಡಿಯೊಳಗಿರುವ
ಭುವಿಯಂತಿಮದಲಿ
ಗೋಪುರದಾ ಸೊಬಗೆಲ್ಲ
ಆಗಸದಲಿಹುದು.
ಅಡಿ ಪಾಯ ಬಧ್ರತೆಯು
ಪಾತಾಳದಲಡಗಿಹುದು
ಭಗವಂತನಾ ಗುಡಿಗೆ
ಬಾಗಿಲಿಹುದೇ?
ನೈಸರ್ಗಿಕ ಸೊಬಗೆಲ್ಲ
ಗುಡಿ ಪ್ರಾಂಗಣದ ಬಣ್ಣ
ಹೊಳಪಿನಾ ಕಳಶವದು
ಅನಿಸಿಕೆಯ ಸ್ವರ್ಗ.
ಸ್ವರ್ಗದ್ಹೊಳಪಿನಾ ಪುರಿಗೆ
ಮೆಟ್ಟಿಲಿರದಾ ಹಾದಿ
ಏರಿಳಿತವಿರದಾ
ನೆಟ್ಟ ನೆತ್ತಿಯಾ ಹಾದಿ
ಇಂತಿರಲು ಈ ಸೊಬಗ
ಅಂದಿನದು ಅನಿಸಿಕೆಯು
ಪಾತಾಳ ಕಳೆದವುಗಳ
ಇರುವಿಕೆಯ ಗುಡಿಯು.
ಪಕ್ವ ಕರ್ಮಗಳೆಲ್ಲ
ಪ್ರಾಂಗಣದ ಬಣ್ಣ
ಕಣ್ಣು ಕುಕ್ಕುವ ಸೊಬಗೆಲ್ಲ
ಭಗವಂತನಿಗಿಲ್ಲ;-
ಇಹುದದುವೆ ನಮಗೆಲ್ಲ
ಸ್ವರ್ಗವೆಟುಕಿದಾ ಸಿರಿ
ನಮಗಿರುವ ಪರಿಯೆಲ್ಲ
ನಮ್ಮದದೇ ಇಲ್ಲೆಲ್ಲ.

1 comment:

Mandasmita said...

"ಆಡಿಪಾಯ ಭದ್ರತೆಯು ಪಾತಾಳದಡಗಿಹುದು ಭಗವಂತನಾ ಗುಡಿಗೆ ಬಾಗಲಿಹುದೆ?" - ತುಂಬಾ ಆರ್ಥಪೂರ್ಣವಾಗಿದೆ. ನಾವು ದೇವರಿಗೆ ಮಾಡುವ ಅಲಂಕಾರವೆಲ್ಲ ನಮ್ಮ ತೃಪ್ತಿಗೋಸ್ಕ್ರರ ಮಾತ್ರ. ನಿಜವಾಗಿ ಭಗವಂತನನ್ನು ಮುಟ್ಟಲು ಪಾತಾಳವನ್ನು ತಲುಪಬೇಕು. ಬಾಗಿಲು ತೆಗೆದಿದ್ದರೂ ಅದರೊಳಗೆ ಬಗ್ಗುವ ಆಥವ ನುಗ್ಗುವ ಶಕ್ತಿ ಇರಬೇಕಲ್ಲವೆ?